ಗಾಝಾದಲ್ಲಿ ಜನಾಂಗೀಯ ಹತ್ಯೆ ತಡೆಯಿರಿ : ಇಸ್ರೇಲ್ ಗೆ ಸೂಚಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ

Update: 2024-01-26 13:44 GMT

 Photo Credit: United Nations

ಹೇಗ್: ಗಾಝಾ ಪಟ್ಟಿಯಲ್ಲಿ ಜನಾಂಗೀಯ ಹತ್ಯೆ ನಡೆಯದಂತೆ ಖಾತ್ರಿಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶುಕ್ರವಾರ ಅಂತಾರಾಷ್ಟ್ರೀಯ ನ್ಯಾಯಾಲಯವು ಇಸ್ರೇಲ್ ಗೆ ಸೂಚಿಸಿದೆ. ಇಸ್ರೇಲ್ ವಿರುದ್ಧ ಜನಾಂಗೀಯ ಹತ್ಯೆಯ ಆರೋಪ ಮಾಡಿ, ಒಂಭತ್ತು ತಾತ್ಕಾಲಿಕ ಕ್ರಮಕ್ಕಾಗಿ ಆಗ್ರಹಿಸಿದ್ದ ದಕ್ಷಿಣ ಆಫ್ರಿಕಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯವು ಈ ಸೂಚನೆ ನೀಡಿದೆ ಎಂದು thehindu.com ವರದಿ ಮಾಡಿದೆ.

ಗಾಝಾದಲ್ಲಿನ ಫೆಲೆಸ್ತೀನಿಯನ್ನರಿಗೆ ಮೂಲಭೂತ ಸೇವೆಗಳು ಹಾಗೂ ಮಾನವೀಯ ನೆರವುಗಳನ್ನು ಒದಗಿಸಲು ಅವಕಾಶ ಒದಗಿಸಬೇಕು ಎಂದೂ ನ್ಯಾಯಾಲಯವು ಇಸ್ರೇಲ್ ಗೆ ಸೂಚಿಸಿದೆ.

ಈ ಮಧ್ಯಂತರ ಆದೇಶವು ಇಸ್ರೇಲ್ ಅನ್ನು ಅಂತಾರಾಷ್ಟ್ರೀಯ ಕಾನೂನು ಬಾಧ್ಯತೆಗೆ ಒಳಪಡಿಸುತ್ತದೆ ಎಂದು ಹೇಳಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷ ಜೋನ್ ಇ. ಡೊನೊಘ್, ಆದೇಶವನ್ನು ಪಾಲಿಸಿರುವುದರ ಕುರಿತು ಒಂದು ತಿಂಗಳೊಳಗೆ ವರದಿ ಸಲ್ಲಿಸಬೇಕು ಎಂದು ಇಸ್ರೇಲ್ ಗೆ ಆದೇಶಿಸಿದ್ದಾರೆ.

ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ತನ್ನ ಆದೇಶವನ್ನು ಜಾರಿಗೊಳಿಸುವ ಯಾವುದೇ ಅಧಿಕಾರ ಇಲ್ಲದೆ ಇರುವುದರಿಂದ, ಇಸ್ರೇಲ್ ಅದರ ಆದೇಶವನ್ನು ಪಾಲಿಸಲಿದೆಯೆ ಎಂಬುದು ಇನ್ನೂ ಚರ್ಚಾಸ್ಪದವಾಗಿಯೇ ಉಳಿದಿದೆ. ಉದಾಹರಣೆಗೆ, ಮಾರ್ಚ್ 2022ರಲ್ಲಿ ಉಕ್ರೇನ್ ಮೇಲಿನ ಆಕ್ರಮಣವನ್ನು ಸ್ಥಗಿತಗೊಳಿಸುವಂತೆ ರಷ್ಯಾಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶಿಸಿತ್ತು. ಕಾನೂನಾತ್ಮಕವಾಗಿ ಆ ಆದೇಶವನ್ನು ಪಾಲಿಸಲೇಬೇಕಿತ್ತಾದರೂ, ಮಾಸ್ಕೊ ಅದನ್ನು ನಿರ್ಲಕ್ಷಿಸಲು ನಿರ್ಧರಿಸಿತು. ಅದರ ಪರಿಣಾಮ ಒತ್ತೆಯಾಳು ಪ್ರಕರಣಗಳು ಮುಂದುವರಿದವು. ಆದರೆ, ಅಂತಾರಾಷ್ಟ್ರೀಯ ನ್ಯಾಯಾಲಯವು ನೀಡಿರುವ ಆದೇಶವು ಅಂತಾರಾಷ್ಟ್ರೀಯ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಗಮನಾರ್ಹ ಪಾತ್ರ ವಹಿಸುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News