ಗಾಝಾ ಯುದ್ಧ ನಿಲ್ಲಿಸುವುದು ಕಷ್ಟವೇನಲ್ಲ : ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಜಿಲ್ ಸ್ಟೈನ್ ಹೇಳಿಕೆ

Update: 2024-09-08 14:24 GMT

ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಜಿಲ್ ಸ್ಟೈನ್ | PC : X/@DrJillStein

ಚಿಕಾಗೊ : ಗಾಝಾದ ಯುದ್ಧ ನಮ್ಮ ಯುದ್ಧವಾಗಿದೆ. ಇದನ್ನು ಇಸ್ರೇಲ್‍ನ ಯುದ್ಧವೆಂದು ಕರೆಯುವುದು ಹಲವು ರೀತಿಯಲ್ಲಿ ತಪ್ಪೆನಿಸುತ್ತದೆ. ಇದು ಅಮೆರಿಕದ ಯುದ್ಧ. ಇದರ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ ಮತ್ತು ಕಣ್ಣು ಮಿಟುಕಿಸುವ ಒಳಗೆ ಇದನ್ನು ನಿಲ್ಲಿಸಬಹುದು ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡಾ. ಜಿಲ್ ಸ್ಟೈನ್ ಹೇಳಿದ್ದಾರೆ.

ನವೆಂಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಟೈನ್ `ಅಮೆರಿಕ ಗ್ರೀನ್ ಪಾರ್ಟಿ'ಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ` ಇಸ್ರೇಲ್ ಪರ ಪಕ್ಷಪಾತ ಧೋರಣೆಯ ಮಾಧ್ಯಮಗಳು ಮತ್ತು ಯುದ್ಧವನ್ನು ಬೆಂಬಲಿಸಲು ಇಸ್ರೇಲ್ ಪರ ರಾಜಕೀಯ ಕ್ರಿಯಾ ಸಮಿತಿಗಳಿಂದ ಲಕ್ಷಾಂತರ ಪ್ರಚಾರ ದೇಣಿಗೆಗಳನ್ನು ಪಡೆದ ರಾಜಕಾರಣಿಗಳಿಂದ ಪ್ರಚೋದಿಸಲ್ಪಟ್ಟಿರುವ ಗಾಝಾದಲ್ಲಿನ ಹಿಂಸಾಚಾರದ ಹೊಣೆಯನ್ನು ಅಮೆರಿಕ ವಹಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ, ಅಮಾಯಕ ನಾಗರಿಕರನ್ನು, ಮಹಿಳೆಯರನ್ನು ಮಕ್ಕಳನ್ನು ಕೊಲ್ಲಲು ಬಳಸುವ ಶಸ್ತ್ರಾಸ್ತ್ರಗಳಲ್ಲಿ 80%ವನ್ನು ಅಮೆರಿಕ ಒದಗಿಸುತ್ತಿದೆ. ಜತೆಗೆ, ಆರ್ಥಿಕ, ಮಿಲಿಟರಿ ನೆರವು, ರಾಜತಾಂತ್ರಿಕ ರಕ್ಷಣೆ, ಗುಪ್ತಚರ ನೆರವನ್ನೂ ನೀಡುತ್ತಿದ್ದೇವೆ. ಆದ್ದರಿಂದ ಇಲ್ಲಿ ಅಮೆರಿಕ ಸಂಪೂರ್ಣ ಸ್ವಾಯತ್ತೆಯನ್ನು ಹೊಂದಿದೆ ಎಂದ ಅವರು `ಹತ್ಯಾಕಾಂಡ'ವನ್ನು ಅನುಮೋದಿಸದಂತೆ ಮತದಾರರಿಗೆ ಕರೆ ನೀಡಿದ್ದಾರೆ.

ಗಾಝಾದಲ್ಲಿ ಈಗ ನಡೆಯುತ್ತಿರುವುದು ಗಂಭೀರ ವಿಷಯವಾಗಿದೆ. ಯಾಕೆಂದರೆ ಇದು ಮಕ್ಕಳ ಚಿತ್ರಹಿಂಸೆ ಮತ್ತು ಕೊಲೆಯನ್ನು ಸಾಮಾನ್ಯೀಕರಿಸುತ್ತಿದೆ. ಅಂತರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳನ್ನು ನಾಶಗೊಳಿಸಲಾಗುತ್ತಿದೆ. ಮಾನವ ಹಕ್ಕುಗಳನ್ನು ಮತ್ತು ಅಂತರಾಷ್ಟ್ರೀಯ ಕಾನೂನುಗಳನ್ನು ವ್ಯವಸ್ಥಿತವಾಗಿ ಕಿತ್ತುಹಾಕಲು ನಾವು ಅನುಮತಿಸಿದರೆ, ಅಂತಿಮವಾಗಿ ಅದು ನಮಗೇ ತಿರುಗು ಬಾಣವಾಗಲಿದೆ. ಯಾಕೆಂದರೆ ಹಲವು ದಶಕಗಳವರೆಗೆ ಅಮೆರಿಕ ಪ್ರಬಲ ಶಕ್ತಿಯಾಗಿತ್ತು, ಆದರೆ ನಾವು ಈಗ ಆರ್ಥಿಕವಾಗಿ ಅಥವಾ ಮಿಲಿಟರಿಯಾಗಿ ಪ್ರಬಲ ಶಕ್ತಿಯಾಗಿ ಉಳಿದಿಲ್ಲ. ತನ್ನ ಪರ ಮತ್ತು ಗ್ರೀನ್ ಪಾರ್ಟಿ ಪರ ಚಲಾವಣೆಯಾಗುವ ಪ್ರತೀ ಮತಗಳು ಗಾಝಾದಲ್ಲಿನ ಯುದ್ಧ ಮಾತ್ರವಲ್ಲ, ವಿಶ್ವದಾದ್ಯಂತದ ಇತರ ಹಲವು ಸಂಘರ್ಷಗಳನ್ನು ನಿಲ್ಲಿಸಲು ನೆರವಾಗಲಿದೆ ಎಂದವರು ಪ್ರತಿಪಾದಿಸಿದ್ದಾರೆ.

ಇಸ್ರೇಲ್‍ನ ನೆರೆಹೊರೆಯ ದೇಶಗಳನ್ನು ಇಸ್ರೇಲ್ ವಿರುದ್ಧ ಒಗ್ಗೂಡಿಸಲಿದ್ದೇವೆ ಎಂದು ಯಹೂದಿ ಮೂಲದ ಅಮೆರಿಕನ್ ಪ್ರಜೆ ಸ್ಟೈನ್ ಹೇಳಿದ್ದಾರೆ. ನಾನು ಇಸ್ರೇಲ್, ಪೆಲೆಸ್ತೀನ್ ಮತ್ತು ಎರಡು ರಾಷ್ಟ್ರ ಪರಿಹಾರ ಸೂತ್ರವನ್ನು ಬೆಂಬಲಿಸುತ್ತೇನೆ. ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಲಪಂಥೀಯ ಒಕ್ಕೂಟವನ್ನು ವಿರೋಧಿಸುತ್ತೇನೆ. ನೆತನ್ಯಾಹು ಸರಕಾರ ಜನಹತ್ಯೆಯಲ್ಲಿ ತೊಡಗಿರುವ `ಫ್ಯಾಸಿಸ್ಟ್ ಸರಕಾರ'ವಾಗಿದೆ. ಇಸ್ರೇಲ್ ನೀತಿಗಳನ್ನು ಟೀಕಿಸುವುದು ಯಹೂದಿ ವಿರೋಧಿಯಾಗುವುದಿಲ್ಲ ಎಂದು ಹೇಳಿದ್ದಾರೆ.

2012 ಮತ್ತು 2016ರಲ್ಲಿಯೂ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜಿಲ್ ಸ್ಟೈನ್, ಎರಡು ಪ್ರಮುಖ ಪಕ್ಷಗಳು ಈ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಅಮೆರಿಕನ್ನರಿಗೆ ಹೊಸ ರಾಜಕೀಯ ಆಯ್ಕೆಯ ಅಗತ್ಯವಿದೆ ಎಂದವರು ಪ್ರತಿಪಾದಿಸಿದ್ದಾರೆ.

ಹಲವು ಚುನಾವಣೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಗ್ರೀನ್ ಪಾರ್ಟಿ, ಆಗಾಗ ಅಂತಿಮ ಫಲಿತಾಂಶದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. 2000ನೇ ಇಸವಿಯಲ್ಲಿ ನಡೆದಿದ್ದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಾಲ್ಫ್ ನಡೇರ್ ಆಗ ಡೆಮಾಕ್ರಾಟಿಕ್ ಪಕ್ಷದಿಂದ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ಅಲ್ ಗೋರ್ ಅವರ ಹಲವು ಮತಗಳನ್ನು ಸೆಳೆದುಕೊಂಡ ಕಾರಣ ರಿಪಬ್ಲಿಕನ್ ಅಭ್ಯರ್ಥಿ ಜಾರ್ಜ್ ಬುಷ್ ಗೆಲುವು ಪಡೆದಿದ್ದರು. 2016ರಲ್ಲಿ ಗ್ರೀನ್ ಪಕ್ಷದ ಜಿಲ್ ಸ್ಟೈನ್ ಡೆಮಾಕ್ರಾಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಮತಗಳನ್ನು ಸೆಳೆದುಕೊಂಡಿದ್ದು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಪೂರಕವಾಗಿತ್ತು.

►ಅಮೆರಿಕನ್ನರ ತೆರಿಗೆ ಹಣವನ್ನು ಇಸ್ರೇಲ್‍ಗೆ ನೀಡಬಾರದು : ಸ್ಟೈನ್

ಇಸ್ರೇಲ್‍ನ ಮಿಲಿಟರಿ ಅಭಿಯಾನಕ್ಕೆ ಆರ್ಥಿಕ ನೆರವು ಒದಗಿಸುವ ಬದಲು ಅಮೆರಿಕನ್ನರ ಜೀವನಕ್ರಮವನ್ನು ಸುಧಾರಿಸಲು ಅಮೆರಿಕ ಅಧ್ಯಕ್ಷರು ಗಮನ ಹರಿಸಬೇಕು. ಆರೋಗ್ಯ ರಕ್ಷಣೆ ವ್ಯವಸ್ಥೆ ಸುಲಭದಲ್ಲಿ ಕೈಗೆಟಕುವಂತೆ, ಇನ್ನಷ್ಟು ಉದ್ಯೋಗ ಸೃಷ್ಟಿಸಲು, ಮಕ್ಕಳ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು, ಹಿರಿಯರು ಮತ್ತು ನಿವೃತ್ತರ ಸಾಮಾಜಿಕ ಭದ್ರತೆ ಕ್ರಮಗಳನ್ನು ಬಲಪಡಿಸಲು ಈ ಹಣವನ್ನು ಬಳಸಬೇಕು ಎಂದು ಜಿಲ್ ಸ್ಟೈನ್ ಆಗ್ರಹಿಸಿದ್ದಾರೆ.

ಅಮೆರಿಕನ್ನರ ತೆರಿಗೆ ಹಣವನ್ನು ಸಾರ್ವಜನಿಕರ ಸೇವೆಗೆ ಬಳಸುವ ಬದಲು ಇಸ್ರೇಲ್‍ಗೆ ರವಾನಿಸಲಾಗುತ್ತಿದೆ. ಸಂಸತ್‍ನ ಬಜೆಟ್‍ನಲ್ಲಿನ ಅರ್ಧಾಂಶದಷ್ಟನ್ನು ಅಂತ್ಯವಿಲ್ಲದ ಯುದ್ಧ ಯಂತ್ರಕ್ಕಾಗಿ ವ್ಯಯಿಸಲಾಗುತ್ತಿದೆ ಎಂದ ಅವರು ಇಸ್ರೇಲ್‍ಗೆ ಮಾರ್ಚ್‍ನಲ್ಲಿ 3.8 ಶತಕೋಟಿ ಡಾಲರ್ ಮತ್ತು ಎಪ್ರಿಲ್‍ನಲ್ಲಿ 8.7 ಶತಕೋಟಿ ಡಾಲರ್ ಮೊತ್ತದ ಮಿಲಿಟರಿ ನೆರವನ್ನು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News