ಚೀನಾದೊಂದಿಗಿನ ಸಹಕಾರ ನಿಲ್ಲಿಸುವುದು ಉಗ್ರರ ಉದ್ದೇಶವಾಗಿದೆ : ಪಾಕ್ ಪ್ರಧಾನಿ
ಇಸ್ಲಾಮಾಬಾದ್ : ಪಾಕಿಸ್ತಾನದ ನೈಋತ್ಯ ಪ್ರಾಂತದ ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದಿ ಉಗ್ರರ ದಾಳಿಗಳು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ನ ಭಾಗವಾಗಿರುವ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸುವ ಗುರಿಯನ್ನು ಹೊಂದಿದೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಮಂಗಳವಾರ ಹೇಳಿದ್ದಾರೆ.
ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಬಲೂಚಿಸ್ತಾನ ಪ್ರಾಂತ ಪಾಕಿಸ್ತಾನದಿಂದ ಪ್ರತ್ಯೇಕಗೊಳ್ಳಬೇಕೆಂದು ಪ್ರಯತ್ನಿಸುತ್ತಿರುವ ಜನಾಂಗೀಯ ಬಂಡುಕೋರರು, ಕಾರ್ಯತಂತ್ರದ ಬಂದರು, ಚಿನ್ನ ಮತ್ತು ಕಲ್ಲಿದ್ದಲು ಯೋಜನೆಗಳನ್ನು ಚೀನಾದ ನೇತೃತ್ವದಲ್ಲಿ ನಡೆಸುವುದನ್ನು ವಿರೋಧಿಸುತ್ತಿದ್ದಾರೆ. ರವಿವಾರ ರಾತ್ರಿಯಿಂದ ಬಲೂಚಿಸ್ತಾನದಲ್ಲಿ ಬಂಡುಗೋರರು ನಡೆಸಿದ ಸರಣಿ ದಾಳಿಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ಮತ್ತು ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಲು ಉಗ್ರರು ಬಯಸಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ನಡುವೆ ಬಿರುಕು ಮೂಡಿಸುವುದು ಅವರ ಉದ್ದೇಶವಾಗಿದೆ ಎಂದು ಸಂಪುಟ ಸಭೆಯಲ್ಲಿ ಷರೀಫ್ ಹೇಳಿದ್ದಾರೆ. 65 ಶತಕೋಟಿ ಡಾಲರ್ ಅಭಿವೃದ್ಧಿ ಬದ್ಧತೆಯನ್ನು ಹೊಂದಿದೆ ಎಂದು ಹೇಳಲಾದ ಸಿಪಿಇಸಿ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರ ಬೆಲ್ಟ್ ಆ್ಯಂಡ್ ರೋಡ್ ಉಪಕ್ರಮದ ಭಾಗವಾಗಿದೆ.
ಬಡತನದಿಂದ ಕಂಗೆಟ್ಟಿರುವ ಬಲೂಚಿಸ್ತಾನದಲ್ಲಿ ಖನಿಜ ಸಂಪನ್ಮೂಲಗಳನ್ನು ಹೊರತೆಗೆಯಲು ಅಗತ್ಯವಿರುವ ಸಂಪನ್ಮೂಲಗಳನ್ನು ಹೊಂದಿಲ್ಲದ ಕಾರಣ ಪ್ರಾಂತದ ಅಭಿವೃದ್ಧಿ ಯೋಜನೆಯಲ್ಲಿ ಪಾಕಿಸ್ತಾನವು ಚೀನಾದ ನೆರವು ಬಯಸಿದೆ.
ಬಲೂಚಿಸ್ತಾನ ಪ್ರಾಂತದಲ್ಲಿ ನಡೆದ ದಾಳಿಗಳನ್ನು ಚೀನಾ ಖಂಡಿಸಿದ್ದು ಭಯೋತ್ಪಾದನೆ ನಿಗ್ರಹ ಕಾರ್ಯದಲ್ಲಿ ಪಾಕಿಸ್ತಾನಕ್ಕೆ ದೃಢ ಬೆಂಬಲ ಮುಂದುವರಿಸುವುದಾಗಿ ಹೇಳಿದೆ. `ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯನ್ನು ಉಳಿಸಿಕೊಳ್ಳಲು ಪಾಕಿಸ್ತಾನದ ಜತೆಗಿನ ಭಯೋತ್ಪಾದನೆ ನಿಗ್ರಹ ಭದ್ರತಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಚೀನಾ ಸಿದ್ಧವಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಲಿನ್ ಜಿಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.