ಮಾಸ್ಕೋ ಸಭಾಂಗಣದಲ್ಲಿನ ದಾಳಿಗೆ ಅಮೆರಿಕವೂ ಹೊಣೆ: ರಶ್ಯ ಪ್ರತಿಪಾದನೆ
ಮಾಸ್ಕೋ: ರಶ್ಯ ರಾಜಧಾನಿ ಮಾಸ್ಕೋದ ಕ್ರೋಕಸ್ ಹಾಲ್ ಸಭಾಂಗಣದಲ್ಲಿ ಮಾರ್ಚ್ 22ರಂದು ನಡೆದ ಗುಂಡಿನ ದಾಳಿ ಮತ್ತು ಗ್ರೆನೇಡ್ ಸ್ಫೋಟ ಪ್ರಕರಣದಲ್ಲಿ ಅಮೆರಿಕದ ಹೊಣೆಯನ್ನೂ ತಳ್ಳಿಹಾಕಲಾಗದು ಎಂದು ರಶ್ಯ ಪುನರುಚ್ಚರಿಸಿದೆ.
ದಾಳಿಯಲ್ಲಿ ಕನಿಷ್ಟ 144 ಮಂದಿ ಸಾವನ್ನಪ್ಪಿದ್ದು ಐಸಿಸ್ ಇದರ ಹೊಣೆ ಹೊತ್ತುಕೊಂಡಿದೆ. ಆದರೆ ಉಕ್ರೇನ್ ಮತ್ತು ಅಮೆರಿಕ ಈ ದಾಳಿಯ ಷಡ್ಯಂತ್ರ ರೂಪಿಸಿದ್ದು ಎಂದು ರಶ್ಯ ವಾದಿಸುತ್ತಿದೆ.
ಕಝಕ್ಸ್ತಾನದ ರಾಜಧಾನಿ ಅಸ್ತಾನಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ(ಎಸ್ಸಿಒ) ಸಭೆಯಲ್ಲಿ ಮಾತನಾಡಿದ ರಶ್ಯದ ರಾಷ್ಟ್ರೀಯ ಭದ್ರತಾ ಮಂಡಳಿ ಮುಖ್ಯಸ್ಥ ನಿಕೊಲಾಯ್ ಪಟ್ರುಷೆವ್ `ಭಯೋತ್ಪಾದಕ ಕೃತ್ಯವನ್ನು ಉಕ್ರೇನ್ ಆಡಳಿತ ನಡೆಸಿಲ್ಲ , ಐಸಿಸ್ ಅಥವಾ ತೀವ್ರವಾದಿಗಳು ನಡೆಸಿದ್ದಾರೆ ಎಂಬ ಅಭಿಪ್ರಾಯವನ್ನು ಬಲವಂತವಾಗಿ ನಮ್ಮ ಮೇಲೆ ಹೇರಲು ಅವರು(ಅಮೆರಿಕ) ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಪೈಶಾಚಿಕ ಕೃತ್ಯದ ಪ್ರಾಯೋಜಕರು ಯಾರು, ಸೂತ್ರಧಾರರು ಯಾರು ಎಂಬುದನ್ನೂ ತಕ್ಷಣ ಸಾಬೀತುಪಡಿಸುವ ಅಗತ್ಯವಿದೆ. ಈ ತನಿಖೆಯ ಜಾಡು ಉಕ್ರೇನ್ನ ವಿಶೇಷ ಸೇವಾ ಪಡೆಯತ್ತ ಬೆಟ್ಟು ತೋರಿಸಿದೆ. ಆದರೆ ಉಕ್ರೇನ್ ಆಡಳಿತ ಸ್ವತಂತ್ರವಾಗಿಲ್ಲ ಮತ್ತು ಅಮೆರಿಕದ ಪೂರ್ಣ ನಿಯಂತ್ರಣದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿದೆ' ಎಂದು ಹೇಳಿದರು.
ಗುಂಡಿನ ದಾಳಿ ನಡೆಸಿದ ಬಳಿಕ ಆರೋಪಿಗಳು ಉಕ್ರೇನ್ ಗಡಿಯತ್ತ ಪಲಾಯನ ಮಾಡಲು ಪ್ರಯತ್ನಿಸಿದ್ದರು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಳೆದ ತಿಂಗಳು ಹೇಳಿಕೆ ನೀಡಿದ್ದರು. ದಾಳಿಗೆ ಎರಡು ವಾರ ಮುಂಚೆ ರಶ್ಯದಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಯ ಸಾಧ್ಯತೆಯ ಬಗ್ಗೆ ರಶ್ಯದಲ್ಲಿನ ಅಮೆರಿಕದ ದೂತಾವಾಸ ರಶ್ಯ ಆಡಳಿತಕ್ಕೆ ಎಚ್ಚರಿಕೆ ನೀಡಿತ್ತು ಎಂದು ಅಮೆರಿಕದ ವಿದೇಶಾಂಗ ಇಲಾಖೆ ದೃಢಪಡಿಸಿತ್ತು.