ಉಕ್ರೇನ್ ನ ಸದಸ್ಯತ್ವಕ್ಕೆ ಯಾವುದೇ ವೇಳಾಪಟ್ಟಿ ಇಲ್ಲ: ನೇಟೊ

Update: 2023-07-12 17:08 GMT

 Photo: PTI

ವಿಲ್ನಿಯಸ್: ಎಲ್ಲಾ ಸದಸ್ಯರು ಒಪ್ಪಿದರೆ ಮತ್ತು ಎಲ್ಲಾ ಷರತ್ತುಗಳು ಈಡೇರಿದರೆ ಉಕ್ರೇನ್ ನೇಟೊದ ಸದಸ್ಯತ್ವ ಪಡೆಯಬಹುದು. ಇದಕ್ಕೆ ಯಾವುದೇ ವೇಳಾಪಟ್ಟಿ ರೂಪಿಸಲು ಸಾಧ್ಯವಿಲ್ಲ ಎಂದು ನೇಟೊ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಇದರೊಂದಿಗೆ ಕೆಲವು ಶಿಷ್ಟಾಚಾರಗಳನ್ನು ಬದಿಗಿರಿಸಿ ಉಕ್ರೇನ್ಗೆ ನೇಟೊ ಸದಸ್ಯತ್ವ ನೀಡಬೇಕೆಂಬ ಕೆಲವು ಸದಸ್ಯದೇಶಗಳ ಯೋಜನೆ ಮತ್ತು ತ್ವರಿತವಾಗಿ ಸದಸ್ಯತ್ವ ಪಡೆದರೆ ರಶ್ಯಕ್ಕೆ ತಕ್ಕ ಪ್ರತಿಕ್ರಿಯೆ ನೀಡಬಹುದು ಎಂಬ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರ ಲೆಕ್ಕಾಚಾರ ಬುಡಮೇಲಾಗಿದೆ. ‘ಇದೊಂದು ಅಸಂಬದ್ಧ ನಿರ್ಧಾರ’ ಎಂದು ಝೆಲೆನ್ಸ್ಕಿ ಪ್ರತಿಕ್ರಿಯಿಸಿದ್ದಾರೆ.

ಲಿಥುವೇನಿಯಾದ ರಾಜಧಾನಿ ವಿಲ್ನಿಯಸ್ನಲ್ಲಿ ಮಂಗಳವಾರ ನಡೆದ ನೇಟೊ ಶೃಂಗಸಭೆಯ ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ನೇಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್ಬರ್ಗ್ ‘ ಉಕ್ರೇನ್ ನೇಟೊದ ಸದಸ್ಯತ್ವ ಪಡೆಯುತ್ತದೆ ಎಂಬುದನ್ನು ಪುನರುಚ್ಚರಿಸುತ್ತೇವೆ. ಅಲ್ಲದೆ ಸದಸ್ಯತ್ವ ಕ್ರಿಯಾ ಯೋಜನೆ ಪ್ರಕ್ರಿಯೆಯಿಂದ ಉಕ್ರೇನ್ಗೆ ವಿನಾಯಿತಿ ನೀಡಲೂ ಒಪ್ಪಿದ್ದೇವೆ. ಇದರಿಂದ ಸದಸ್ಯತ್ವದೆಡೆಗಿನ ಉಕ್ರೇನ್ನ ದಾರಿ ಎರಡು ಹಂತದಿಂದ ಒಂದು ಹಂತಕ್ಕೆ ಬದಲಾಗಲಿದೆ’ ಎಂದು ಹೇಳಿದ್ದಾರೆ.

ಹಲವು ನೇಟೊ ಸದಸ್ಯ ದೇಶಗಳು ಉಕ್ರೇನ್ಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸುತ್ತಿದ್ದರೂ, ಉಕ್ರೇನ್ಗೆ ನೇಟೊ ಸದಸ್ಯತ್ವ ನೀಡುವ ವಿಷಯದಲ್ಲಿ 31 ಸದಸ್ಯ ದೇಶಗಳೊಳಗೆ ಸಹಮತ ಮೂಡಿಲ್ಲ. ರಶ್ಯದ ಎದುರಿನ ಯುದ್ಧ ಮುಗಿದ ಬಳಿಕ ಉಕ್ರೇನ್ಗೆ ಸದಸ್ಯತ್ವ ನೀಡಬೇಕು ಎಂಬುದು ಕೆಲವು ಸದಸ್ಯರ ನಿಲುವಾಗಿದೆ. ಝೆಲೆನ್ಸ್ಕಿಯ ಕಳವಳದ ಬಗ್ಗೆ ಪ್ರತಿಕ್ರಿಯಿಸಿರುವ ಸ್ಟಾಲ್ಟನ್ಬರ್ಗ್ ‘ಮೊದಲು ಉಕ್ರೇನ್ ಯುದ್ಧದಲ್ಲಿ ಗೆಲ್ಲುವುದನ್ನು ಖಚಿತಪಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಉಕ್ರೇನ್ ಉಳಿದರೆ ಮಾತ್ರ ಸದಸ್ಯತ್ವದ ಬಗ್ಗೆ ಚರ್ಚಿಸಬಹುದು’ ಎಂದರು. ಈ ಮಧ್ಯೆ ಮಹತ್ವದ ಬೆಳವಣಿಗೆಯಲ್ಲಿ, ಸ್ವೀಡನ್ ನೇಟೊದ ಸದಸ್ಯತ್ವ ಪಡೆಯಲು ವಿರೋಧಿಸುತ್ತಿದ್ದ ಟರ್ಕಿ ಮಂಗಳವಾರ ಒಪ್ಪಿಗೆ ಸೂಚಿಸಿದೆ. ಆದರೆ, ಯುದ್ಧ ನಡೆಯುತ್ತಿರುವಾಗಲೇ ಉಕ್ರೇನ್ಗೆ ಸದಸ್ಯತ್ವ ನೀಡಿದರೆ ರಶ್ಯಕ್ಕೆ ಪ್ರಚೋದನೆಯಾಗಿ ಪರಿಣಮಿಸಬಹುದು ಎಂದು ಕೆಲವು ಸದಸ್ಯರು ಆತಂಕ ಸೂಚಿಸಿದ್ದಾರೆ.

ಉಕ್ರೇನ್ ನೇಟೊದ ಸದಸ್ಯತ್ವ ಪಡೆಯಲು ಇನ್ನೂ ಸಿದ್ಧವಾಗಿಲ್ಲ. ನೇಟೊದೆ ಸದಸ್ಯರು ಪ್ರಜಾಪ್ರಭುತ್ವೀಕರಣದಿಂದ ಹಿಡಿದು ಇತರ ವಿಷಯಗಳಿಗೆ ಸಂಬಂಧಿಸಿದ ಮಾನದಂಡಗಳನ್ನು ಪೂರೈಸಬೇಕಾಗಿದೆ ಎಂದು ಕಳೆದ ವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದ್ದರು. ಉಕ್ರೇನ್ನಲ್ಲಿರುವ ಸೋವಿಯತ್ ಯುಗದ ಶಸ್ತ್ರಾಸ್ತ್ರಗಳನ್ನು ಆಧುನೀಕರಣಗೊಳಿಸುವುದು ಮತ್ತು ಆ ದೇಶದ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಆರೋಪಗಳನ್ನು ದೂರಗೊಳಿಸುವ ಬಗ್ಗೆ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ದೇಶಗಳು ಆಗ್ರಹಿಸಿವೆ.

ಸದಸ್ಯ ದೇಶಗಳ ಮೇಲೆ ಆಕ್ರಮಣದ ಸಂದರ್ಭ ನೇಟೊದ ಬಲಿಷ್ಟ ಪಡೆ ನೆರವಿಗೆ ಧಾವಿಸಬಹುದು. ಆದರೆ ಸದಸ್ಯತ್ವ ಪಡೆಯದ ದೇಶಗಳ ಪರವಾಗಿ ನೇಟೊ ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳುವಂತಿಲ್ಲ.

ಅಸಂಬದ್ಧ: ಝೆಲೆನ್ಸ್ಕಿ ಪ್ರತಿಕ್ರಿಯೆ

‘ಆಹ್ವಾನ ನೀಡುವಾಗ ಅಥವಾ ಸದಸ್ಯತ್ವಕ್ಕೆ ಉಕ್ರೇನ್ ಅರ್ಜಿ ಸಲ್ಲಿಸುವಾಗ ಯಾವುದೇ ಸಮಯದ ಚೌಕಟ್ಟನ್ನು ರೂಪಿಸಿಲ್ಲ. ಹಾಗಿರುವಾಗ ಇದೊಂದು ಅಸಂಬದ್ಧ ಮತ್ತು ಅನಿರೀಕ್ಷಿತ ನಿರ್ಧಾರವಾಗಿದೆ. ಇದೇ ವೇಳೆ ‘ಷರತ್ತು’ಗಳ ಅಸ್ಪಷ್ಟ ಪದಗಳನ್ನು ಸೇರಿಸಲಾಗಿದೆ. ನೇಟೊಗೆ ಉಕ್ರೇನ್ ಅನ್ನು ಆಹ್ವಾನಿಸಲು ಅಥವಾ ಒಕ್ಕೂಟದ ಸದಸ್ಯತ್ವ ನೀಡುವ ಬಗ್ಗೆ ಇನ್ನೂ ಸಿದ್ಧತೆ ನಡೆಸಿಲ್ಲವೆಂದು ಕಾಣುತ್ತದೆ’ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ನಾವು ನಮ್ಮ ಮಿತ್ರರನ್ನು ಗೌರವಿಸುತ್ತೇವೆ. ಉಕ್ರೇನ್ ಕೂಡಾ ಗೌರವಕ್ಕೆ ಅರ್ಹವಾಗಿದೆ. ಅನಿಶ್ಚಿತತೆ ದೌರ್ಬಲ್ಯವನ್ನು ಸೂಚಿಸುತ್ತದೆ. ಈ ಬಗ್ಗೆ ಶೃಂಗಸಭೆಯಲ್ಲಿ ಮುಕ್ತವಾಗಿ ಮಾತನಾಡುತ್ತೇನೆ’ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News