ಅಮೆರಿಕದ ಶ್ವೇತಭವನ ಸುತ್ತ ಫೆಲೆಸ್ತೀನ್ ಪರ ಪ್ರತಿಭಟನೆ
ವಾಶಿಂಗ್ಟನ್, ಜೂ.9: ವಾಶಿಂಗ್ಟನ್ನಲ್ಲಿ ಶನಿವಾರ ಫೆಲೆಸ್ತೀನ್ ಪರ ಬೃಹತ್ ಪ್ರತಿಭಟನೆ ನಡೆದಿದ್ದು ಸುಮಾರು 30,000ಕ್ಕೂ ಅಧಿಕ ಪ್ರತಿಭಟನಾಕಾರರು ಶ್ವೇತಭವನವನ್ನು ಸುತ್ತುವರಿದು ಇಸ್ರೇಲ್ ಗಾಝಾ ಯುದ್ಧವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದರು ಹಾಗೂ ಇಸ್ರೇಲ್ ಅನ್ನು ಬೆಂಬಲಿಸುವ ಬೈಡನ್ ಆಡಳಿತವನ್ನು ಖಂಡಿಸಿ ಘೋಷಣೆ ಕೂಗಿದರು.
ಕೆಂಪು ಬಟ್ಟೆಗಳನ್ನು ಧರಿಸಿದ ಪ್ರತಿಭಟನಾಕಾರರು `ಗಾಝಾ ಮುತ್ತಿಗೆಯನ್ನು ತಕ್ಷಣ ಕೊನೆಗೊಳಿಸಿ, `ಫೆಲೆಸ್ತೀನ್ ಸ್ವತಂತ್ರವಾಗಲಿ' ಇಸ್ರೇಲ್ಗೆ ಅಮೆರಿಕ ನೀಡುತ್ತಿರುವ ಮಿಲಿಟರಿ, ಧನಸಹಾಯವನ್ನು ನಿಲ್ಲಿಸಿ' ಎಂಬ ಬ್ಯಾನರ್ ಪ್ರದರ್ಶಿಸಿದರು. ಕೆಲವರು ಶ್ವೇತಭವನದ ಗೇಟಿನ ಎದುರು ಹೊಗೆ ಜ್ವಾಲೆಗಳನ್ನು ಹೊತ್ತಿಸಿದರೆ ಇನ್ನು ಕೆಲವರು ಶ್ವೇತಭವನದ ಹುಲ್ಲುಹಾಸಿನ ಮೇಲೆ ಹೊಗೆ ಬಾಂಬ್ಗಳನ್ನು ಎಸೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪ್ರತಿಭಟನಾಕಾರರು ಶ್ವೇತಭವನದತ್ತ ಸಾಗುವ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ವಾಶಿಂಗ್ಟನ್ ಡಿಸಿ ಮೆಟ್ರೊಪಾಲಿಟನ್ ಪೊಲೀಸ್ ಇಲಾಖೆ ಮತ್ತು ಗುಪ್ತಚರ ಸೇವಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಪ್ರತಿಭಟನೆ ನಡೆದಾಗ ಅಧ್ಯಕ್ಷ ಬೈಡನ್ ಮತ್ತವರ ಪತ್ನಿ ಮನೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.
ಗಾಝಾ ಯುದ್ಧದಲ್ಲಿ ಇಸ್ರೇಲ್ಗೆ ಅಮೆರಿಕ ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲ ನೀಡುತ್ತಿರುವುದನ್ನು ಖಂಡಿಸಿ ಮತ್ತು ಫೆಲೆಸ್ತೀನ್ ಬೆಂಬಲಿಸಿ ರಾಜಧಾನಿ ವಾಶಿಂಗ್ಟನ್ ಸಹಿತ ಅಮೆರಿಕಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಅಮೆರಿಕದ ಪ್ರತಿಷ್ಠಿತ ವಿವಿಗಳ ಆವರಣದಲ್ಲಿಯೂ ಫೆಲೆಸ್ತೀನ್ ಪರ ಪ್ರತಿಭಟನೆ ಭುಗಿಲೆದ್ದಿದೆ. ಹಲವು ನಗರಗಳಲ್ಲಿ ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಪ್ರತಿಭಟನೆ ನಡೆದು ರಸ್ತೆ ತಡೆ ನಡೆಸಲಾಗಿದೆ. ಈ ಮಧ್ಯೆ, ಬೈಡನ್ ಅವರ ಇಸ್ರೇಲ್ ನೀತಿಯನ್ನು ವಿರೋಧಿಸಿ ಬೈಡನ್ ಆಡಳಿತದ ಕನಿಷ್ಠ 8 ಅಧಿಕಾರಿಗಳು ರಾಜೀನಾಮೆ ಸಲ್ಲಿಸಿರುವುದಾಗಿ ವರದಿಯಾಗಿದೆ.
2 ಮೈಲು ಉದ್ದದ ಕೆಂಪು ಬ್ಯಾನರ್
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಶ್ವೇತಭವನದ ಸುತ್ತ 2 ಮೈಲು ಉದ್ದದ ಕೆಂಪು ಬ್ಯಾನರ್ ಅನ್ನು ಹಿಡಿದು ಸಾಲಾಗಿ ನಿಂತರು. ದಕ್ಷಿಣ ಗಾಝಾದ ರಫಾ ನಗರದಲ್ಲಿ ತನ್ನ ಕಾರ್ಯಾಚರಣೆಯ ಮೂಲಕ ಇಸ್ರೇಲ್ ಕೆಂಪು ಗೆರೆಯನ್ನು ದಾಟಿದೆ ಎಂಬುದನ್ನು ಇದು ಸಾಂಕೇತಿಸಿದೆ ಎಂದು ಪ್ರತಿಭಟನೆಯ ಆಯೋಜಕರು ಹೇಳಿದ್ದಾರೆ. ಬ್ಯಾನರ್ ಅನಾವರಣಗೊಳಿಸುವ ವೀಡಿಯೊವನ್ನು `ಎಕ್ಸ್'ನಲ್ಲಿ ಪೋಸ್ಟ್ ಮಾಡಲಾಗಿದ್ದು `ಶ್ವೇತಭವನವು ಈಗ ಕೆಂಪುಗೆರೆಯ ಜನರಿಂದ ಸುತ್ತುವರಿಯಲ್ಪಟ್ಟಿದೆ. ಈ ಎರಡು ಮೈಲುಗಳ ಕೆಂಪು ಬ್ಯಾನರ್ ಅಕ್ಟೋಬರ್ 7ರಿಂದ ಇಸ್ರೇಲ್ನಿಂದ ಹತ್ಯೆಯಾದ 40,000ಕ್ಕೂ ಅಧಿಕ ಫೆಲೆಸ್ತೀನಿಯರನ್ನು ಪಟ್ಟಿ ಮಾಡುತ್ತದೆ' ಎಂಬ ಕ್ಯಾಪ್ಷನ್ ನೀಡಲಾಗಿದೆ.
ʼಬೈಡನ್ ಗೆರೆ ಎಳೆಯಲು ಸಾಧ್ಯವಿಲ್ಲ, ಆದರೆ ನಾವು ಮಾಡಬಹುದು. ಕೆಂಪು ಬಟ್ಟೆ ಧರಿಸಿ ನಮ್ಮ ಆಗ್ರಹವನ್ನು ಗಟ್ಟಿಧ್ವನಿಯಲ್ಲಿ ಘೋಷಿಸುವ ಮೂಲಕ ನಾವು ಕೆಂಪುಗೆರೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ' ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.