ಜೋರ್ಡಾನ್ ಗಡಿಯ ಬಳಿ ಗುಂಡಿನ ದಾಳಿ | ಮೂರು ಇಸ್ರೇಲ್ ಪ್ರಜೆಗಳು ಮೃತ್ಯು
ಜೆರುಸಲೇಂ : ಪಶ್ಚಿಮದಂಡೆ- ಜೋರ್ಡಾನ್ ಗಡಿದಾಟು(ಬಾರ್ಡರ್ ಕ್ರಾಸಿಂಗ್) ಬಳಿ ಶನಿವಾರ ಟ್ರಕ್ ಚಾಲಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಸ್ರೇಲ್‍ನ ಮೂವರು ಪ್ರಜೆಗಳು ಸಾವನ್ನಪ್ಪಿರುವುದಾಗಿ ಇಸ್ರೇಲ್ ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಜೋರ್ಡಾನ್‍ನ ಕಡೆಯಿಂದ ಪಶ್ಚಿಮದಂಡೆಯನ್ನು ಸಂಪರ್ಕಿಸುವ ಅಲೆಂಬಿ ಸೇತುವೆ ಮೂಲಕ ಬಂದ ಟ್ರಕ್‍ನ ಚಾಲಕ ಅಲ್ಲಿದ್ದ ಇಸ್ರೇಲ್ ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಲ್ಲಿ ಮೂವರು ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಭದ್ರತಾ ಪಡೆ ಪ್ರತಿದಾಳಿ ನಡೆಸಿ ಆರೋಪಿಯನ್ನು ಹತ್ಯೆ ಮಾಡಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಜೋರ್ಡಾನ್ 1994ರಲ್ಲಿ ಇಸ್ರೇಲ್ ಜತೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದರೂ ಫೆಲೆಸ್ತೀನ್ ಕುರಿತ ಇಸ್ರೇಲ್ ನೀತಿಯನ್ನು ವಿರೋಧಿಸುತ್ತಿದೆ. ಅಲೆಂಬಿ ಸೇತುವೆ ಮಾರ್ಗವನ್ನು ಇಸ್ರೇಲ್, ಫೆಲೆಸ್ತೀನ್ ಪ್ರಜೆಗಳು ಹಾಗೂ ಅಂತರಾಷ್ಟ್ರೀಯ ಪ್ರವಾಸಿಗಳು ಬಳಸುತ್ತಿದ್ದಾರೆ.
1967ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಪಶ್ಚಿಮದಂಡೆ, ಗಾಝಾ ಮತ್ತು ಪೂರ್ವ ಜೆರುಸಲೇಂ ಅನ್ನು ಇಸ್ರೇಲ್ ವಶಪಡಿಸಿಕೊಂಡಿತ್ತು. 2005ರಲ್ಲಿ ಗಾಝಾದಿಂದ ಯೋಧರನ್ನು ಮತ್ತು ತನ್ನ ಪ್ರಜೆಗಳನ್ನು ಇಸ್ರೇಲ್ ವಾಪಾಸು ಕರೆಸಿಕೊಂಡರೂ, ಗಾಝಾದ ವಾಯುಕ್ಷೇತ್ರ, ಕರಾವಳಿ ಪ್ರದೇಶ ಹಾಗೂ ಬಹುತೇಕ ಗಡಿ ದಾಟುಗಳ ನಿಯಂತ್ರಣವನ್ನು ಉಳಿಸಿಕೊಂಡಿದೆ.