ಅಫ್ಘಾನಿಸ್ತಾನದೊಂದಿಗಿನ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಇಸ್ರೇಲ್ ಬೇಹುಗಾರರ ಸೆರೆ : ಇರಾನ್
ಟೆಹ್ರಾನ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದೊಂದಿಗಿನ ಜಂಟಿ ಕಾರ್ಯಾಚರಣೆಯಲ್ಲಿ ಇಸ್ರೇಲ್ ನ ಬೇಹುಗಾರಿಕಾ ಸಂಸ್ಥೆಯಾದ ಮೊಸಾದ್ ಪರವಾಗಿ ಕಾರ್ಯಾಚರಿಸುತ್ತಿದ್ದ ಇರಾನ್ ಮೂಲದ ಮೂವರು ಇಸ್ರೇಲ್ ಬೇಹುಗಾರರನ್ನು ಸೆರೆ ಹಿಡಿಯಲಾಗಿದೆ ಎಂದು ರವಿವಾರ ಇರಾನ್ ನ ಸರ್ಕಾರಿ ಮಾಧ್ಯಮವು ವರದಿ ಮಾಡಿದೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎರಡು ರಾಷ್ಟ್ರಗಳ ನಡುವಿನ ಗುಡ್ಡುಗಾಡು ಪ್ರದೇಶದಲ್ಲಿ ಸೆರೆ ಹಿಡಿಯಲಾಗಿರುವ ಮೂವರು ಮೊಸಾದ್ ಏಜೆಂಟ್ ಗಳು ಇರಾನ್ ಪ್ರಜೆಗಳಾಗಿದ್ದಾರೆ ಎಂದು ಆ ಸುದ್ದಿ ಸಂಸ್ಥೆಯು ಹೇಳಿದೆ.
ಶನಿವಾರ ತಾಲಿಬಾನ್ ನಿಯೋಗವು ಇರಾನ್ ನ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದೊಲ್ಲಾಹಿಯನ್ ಸೇರಿದಂತೆ ಇರಾನ್ ನ ಉನ್ನತ ಅಧಿಕಾರಿಗಳೊಂದಿಗಿನ ಸಭೆಗಾಗಿ ಟೆಹ್ರಾನ್ ಗೆ ಆಗಮಿಸಿದ ಬೆನ್ನಿಗೇ ಈ ಬಂಧನದ ಸುದ್ದಿಯು ಹೊರ ಬಿದ್ದಿದೆ.
ಮೂವರು ಆರೋಪಿಗಳು ಇರಾನ್ ಅನ್ನು ಗುರಿಯಾಗಿಸಿಕೊಂಡು ಅಫ್ಘಾನಿಸ್ತಾನದ ಗಡಿಯಿಂದ ಕಮಿಕಝೆ ಡ್ರೋನ್ ದಾಳಿ ನಡೆಸಲು ಯೋಜಿಸಿದ್ದರು ಎಂದು ಸರ್ಕಾರಿ ಸುದ್ದಿ ವಾಹಿನಿಯು ಹೇಳಿದೆ.
“ಅವರನ್ನು ವಿಚಾರಣೆಗಾಗಿ ಇರಾನ್ ಗೆ ಹಸ್ತಾಂತರಿಸಲಾಗುತ್ತದೆ” ಎಂದು ಸುದ್ದಿ ಸಂಸ್ಥೆಯು ವರದಿ ಮಾಡಿದೆ.
ತನ್ನ ಬದ್ಧ ವೈರಿಯಾದ ಇಸ್ರೇಲ್ ಗೆ ಇಸ್ಲಾಮಿಕ್ ಗಣರಾಜ್ಯವಾದ ಇರಾನ್ ಈವರೆಗೆ ಮಾನ್ಯತೆ ನೀಡಿಲ್ಲ. ಈ ಎರಡೂ ರಾಷ್ಟ್ರಗಳ ನಡುವೆ ಹಲವಾರು ವರ್ಷಗಳಿಂದ ಶೀತಲ ಸಮರ ಮುಂದುವರಿದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಇರಾನ್, ಇಸ್ರೇಲ್ ನಮ್ಮ ಪರಮಾಣು ಕ್ರಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಸರಣಿ ವಿಧ್ವಂಸಕ ದಾಳಿ ಹಾಗೂ ಹತ್ಯೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದೆ.