ಹಮಾಸ್ ಉನ್ನತ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಮೃತ್ಯು: ಅಮೆರಿಕ
ವಾಷಿಂಗ್ಟನ್: ಹಮಾಸ್‍ನ ಉನ್ನತ ಕಮಾಂಡರ್ ಮರ್ವಾನ್ ಇಸ್ಸಾ ಕಳೆದ ವಾರ ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ನಡೆಸಿದ್ದ ವಾಯುದಾಳಿಯಲ್ಲಿ ಹತನಾಗಿರುವುದಾಗಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ದೃಢಪಡಿಸಿದ್ದಾರೆ.
`ಹಮಾಸ್‍ನ ಮೂರನೇ ಉನ್ನತ ಕಮಾಂಡರ್ ಮರ್ವಾನ್ ಇಸ್ಸಾ ಕಳೆದ ವಾರ ಇಸ್ರೇಲ್‍ನ ಕಾರ್ಯಾಚರಣೆಯಲ್ಲಿ ಹತನಾಗಿದ್ದು ಇತರ ಉನ್ನತ ಕಮಾಂಡರ್ ಗಳು ಹಮಾಸ್‍ನ ಸುರಂಗ ಜಾಲದ ಆಳದಲ್ಲಿ ಅವಿತು ಕುಳಿತಿದ್ದಾರೆ. ಅವರಿಗೂ ಶೀಘ್ರವೇ ನ್ಯಾಯ ಸಿಗಲಿದೆ' ಎಂದವರು ಹೇಳಿದ್ದಾರೆ. ಆದರೆ ಇದನ್ನು ಹಮಾಸ್ ಇನ್ನೂ ದೃಢಪಡಿಸಿಲ್ಲ. ಅಕ್ಟೋಬರ್ 7ರಂದು ಇಸ್ರೇಲ್‍ನ ಮೇಲೆ ಹಮಾಸ್ ನಡೆಸಿದ ದಾಳಿಯ ಯೋಜನೆ ರೂಪಿಸಿದ್ದವರಲ್ಲಿ ಒಬ್ಬನಾಗಿರುವ ಮರ್ವಾನ್ ಇಸ್ಸಾ, ಹಮಾಸ್‍ನ ಸಶಸ್ತ್ರ ವಿಭಾಗದ ಉಪಮುಖ್ಯಸ್ಥನಾಗಿದ್ದ ಎಂದು ಇಸ್ರೇಲ್‍ನ ಭದ್ರತಾ ಪಡೆ ಹೇಳಿದೆ. ಈ ಮಧ್ಯೆ, ಸೋಮವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಬೈಡನ್ ಜತೆ ಫೋನ್‍ನಲ್ಲಿ ಮಾತನಾಡಿದ್ದು ಇಬ್ಬರೂ ಗಾಝಾದಲ್ಲಿ ಈಗಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಉತ್ತರ ಗಾಝಾಕ್ಕೆ ವಿಶೇಷ ಒತ್ತು ನೀಡಿ, ಗಾಝಾದ್ಯಂತ ಅಗತ್ಯವಿರುವವರಿಗೆ ಜೀವರಕ್ಷಕ ನೆರವಿನ ಹರಿವನ್ನು ಗಮನಾರ್ಹವಾಗಿ ಹೆಚ್ಚಿಸುವ ತುರ್ತು ಅಗತ್ಯವನ್ನು ಬೈಡನ್ ಒತ್ತಿಹೇಳಿದರು. ಗಾಝಾಕ್ಕೆ ಮಾನವೀಯ ನೆರವಿನ ಹೆಚ್ಚಳ ಮತ್ತು ಹಮಾಸ್‍ನ ವಶದಲ್ಲಿರುವ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಯ ಪ್ರಯತ್ನದ ಬಗ್ಗೆ ಉಲ್ಲೇಖಿಸಿದ ಬೈಡನ್, ಇಸ್ರೇಲ್‍ನ ದೀರ್ಘಾವಧಿಯ ಭದ್ರತೆಗಾಗಿ ಅಮೆರಿಕದ ಬದ್ಧತೆಯನ್ನು ಪುನರುಚ್ಚರಿಸಿದರು ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.