ಮ್ಯಾನ್ಮಾರ್ ಸೇನಾಡಳಿತದ ವಿರುದ್ಧ ಕಠಿಣ ನಿರ್ಬಂಧ: ವಿಶ್ವಸಂಸ್ಥೆ ಪ್ರತಿನಿಧಿ ಆಗ್ರಹ
ವಾಷಿಂಗ್ಟನ್: ಮ್ಯಾನ್ಮಾರ್ ನ ಸೇನಾಡಳಿತದ ಆದಾಯದ ಪ್ರಮುಖ ಮೂಲವಾದ ತೈಲ ಮತ್ತು ಅನಿಲ ಕ್ಷೇತ್ರಗಳನ್ನೂ ನಿರ್ಬಂಧದ ವ್ಯಾಪ್ತಿಯಡಿ ಸೇರಿಸುವ ಮೂಲಕ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸುವಂತೆ ವಿಶ್ವಸಂಸ್ಥೆ ಮಾನವ ಹಕ್ಕು ತಜ್ಞರು ಅಮೆರಿಕವನ್ನು ಆಗ್ರಹಿಸಿದ್ದಾರೆ.
ಮ್ಯಾನ್ಮಾರ್‍ನ ಫಾರಿನ್ ಟ್ರೇಡ್ ಬ್ಯಾಂಕ್ ಮತ್ತು ಮ್ಯಾನ್ಮ ಇನ್ವೆಸ್ಟ್‍ಮೆಂಟ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್‍ನ ವಿರುದ್ಧ ಜೂನ್‍ನಲ್ಲಿ ನಿರ್ಬಂಧ ವಿಧಿಸಿರುವ ಅಮೆರಿಕದ ಕ್ರಮವನ್ನು ಸ್ವಾಗತಿಸಿರುವ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಟಾಮ್ ಆಂಡ್ರೂಸ್, ಆದರೆ ಇದು ಸಾಕಾಗದು. ಇನ್ನಷ್ಟು ಕಠಿಣ ನಿರ್ಬಂಧದ ಅಗತ್ಯವಿದೆ. ಆದ್ದರಿಂದ ಯುರೋಪಿಯನ್ ಯೂನಿಯನ್‍ನ ರೀತಿಯಲ್ಲೇ ಅಮೆರಿಕವೂ ಮ್ಯಾನ್ಮಾರ್ ಸೇನಾಡಳಿತದ ಆದಾಯ ಮೂಲವನ್ನು ನಿಯಂತ್ರಿಸಬೇಕು. ಅವರ ಆದಾಯ ಕಡಿತಗೊಂಡರೆ ದೌರ್ಜನ್ಯ ಮುಂದುವರಿಸುವ ಅವರ ಸಾಮಥ್ರ್ಯಕ್ಕೆ ತಡೆಯಾಗಲಿದೆ. ಜತೆಗೆ, ಇತರ ದೇಶಗಳಿಂದ ಮ್ಯಾನ್ಮಾರ್ ಸೇನಾಡಳಿತಕ್ಕೆ ಶಸ್ತ್ರಾಸ್ತ್ರ ಪೂರೈಕೆಯಾಗದಂತೆಯೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮ್ಯಾನ್ಮಾರ್‍ಗೆ ಓಡಿಬಂದಿರುವ ರೊಹಿಂಗ್ಯಾ ನಿರಾಶ್ರಿತರಿಗೆ ಅಮೆರಿಕ ಸಹಿತ ಕೆಲವು ಅಂತರಾಷ್ಟ್ರೀಯ ದಾನಿಗಳಿಂದ ಆರ್ಥಿಕ ನೆರವು ಕಡಿತಗೊಳ್ಳಬಹುದು ಎಂಬ ವರದಿಯಿಂದ ಕಳವಳಗೊಂಡಿರುವುದಾಗಿ ಟಾಮ್ ಆಂಡ್ರೂಸ್ ಹೇಳಿದ್ದಾರೆ.
ಮ್ಯಾನ್ಮಾರ್‍ನ ಒಳಗೆ ಮತ್ತು ಹೊರಗೆ ಸೇನಾಡಳಿತದ ಬಲಿಪಶುಗಳಿಗೆ ಕನಿಷ್ಟ ಮಾನವೀಯ ಬೆಂಬಲದ ಮಟ್ಟವನ್ನು ಅಮೆರಿಕ ಕಾಯ್ದುಕೊಳ್ಳಬೇಕಿದೆ. ಬಾಂಗ್ಲಾದೇಶದಲ್ಲಿ ರೊಹಿಂಗ್ಯಾ ಮಕ್ಕಳಿಗೆ ಆಹಾರ ಪಡಿತರವನ್ನು ಒಳಗೊಂಡಿರುವ ಜಂಟಿ ಕ್ರಿಯಾಯೋಜನೆಗೆ ಈ ವರ್ಷ ಇಲ್ಲಿಯವರೆಗೆ ಕೇವಲ 32% ನಿಧಿ ಮಾತ್ರ ಪೂರೈಕೆಯಾಗಿದೆ ಎಂದವರು ಹೇಳಿದ್ದಾರೆ.
ಅಂತರಾಷ್ಟ್ರೀಯ ನಿರ್ಬಂಧದಿಂದ ಯಾವುದೇ ಪರಿಣಾಮವಾಗಿಲ್ಲ ಮತ್ತು ತಮ್ಮ ವೈಮಾನಿಕ ದಾಳಿಗಳು ಬಂಡುಕೋರರನ್ನು ಗುರಿಯಾಗಿಸಿವೆ. ನಾಗರಿಕರನ್ನಲ್ಲ ಎಂದು ಮ್ಯಾನ್ಮಾರ್ ಸೇನಾಡಳಿತ ಹೇಳಿದೆ. ಮ್ಯಾನ್ಮಾರ್‍ನಲ್ಲಿ ಸೇನಾಡಳಿತ ಜಾರಿಗೊಂಡ ಬಳಿಕ ಕನಿಷ್ಟ 1 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಟಾಮ್ ಆಂಡ್ರೂಸ್ ವಿಶ್ವಸಂಸ್ಥೆಗೆ ವರದಿ ನೀಡಿದ್ದಾರೆ.