ಇಬ್ಬರು ಆಟಗಾರರಿಗೆ ಕೋವಿಡ್ ಸೋಂಕು ದೃಢ; ಏಶ್ಯಕಪ್ ಗೂ ಮುನ್ನ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ತೀವ್ರ ಹಿನ್ನಡೆ
ಕೊಲಂಬೊ: ಗಾಯದ ಸಮಸ್ಯೆ ಹಾಗೂ ಕೋವಿಡ್-19 ಸೋಂಕಿನ ಕಾರಣಕ್ಕೆ ವೇಗಿಗಳಾದ ದುಶ್ಮಂತ ಚಾಮೀರ ಹಾಗೂ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಸಹಿತ ನಾಲ್ವರು ಕ್ರಿಕೆಟಿಗರು ಮುಂಬರುವ ಏಶ್ಯಕಪ್‌ನಲ್ಲಿ ಆಡುವುದು ಅನುಮಾನವೆನಿಸಿದ್ದು, ಈ ಬೆಳವಣಿಗೆಯು ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.
ಚಾಮೀರ ಅವರು ಇತ್ತೀಚೆಗೆ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್)ವೇಳೆ ಭುಜನೋವಿಗೆ ತುತ್ತಾದ ಕಾರಣ ಏಶ್ಯಕಪ್‌ನಿಂದ ಹೊರಗುಳಿದಿದ್ದಾರೆ.
ಪ್ರಮುಖ ಸ್ಪಿನ್ನರ್ ವನಿಂದು ಹಸರಂಗಗೆ ಎಲ್‌ಪಿಎಲ್ ಫೈನಲ್‌ಗಿಂತ ಮೊದಲು ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಹಸರಂಗ ಏಶ್ಯಕಪ್‌ನಲ್ಲಿ ಕನಿಷ್ಠ 2 ಪಂದ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ‘ಇಎಸ್‌ಪಿಎನ್ ಕ್ರಿಕ್‌ಇನ್‌ಫೋ’ ವರದಿ ಮಾಡಿದೆ.
ಬ್ಯಾಟರ್‌ಗಳಾದ ಕುಶಾಲ್ ಪೆರೇರ ಹಾಗೂ ಅವಿಷ್ಕ ಫೆರ್ನಾಂಡೊ ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಪೆರೇರ ಹಾಗೂ ಫೆರ್ನಾಂಡೊ ಮೇಲೆ ತೀವ್ರ ನಿಗಾವಹಿಸಲಾಗಿದ್ದು, ಈ ಇಬ್ಬರ ಶ್ರೀಲಂಕಾ ತಂಡದ ಸೇರ್ಪಡೆಯು ಶೀಘ್ರ ಚೇತರಿಕೆಯನ್ನು ಅವಲಂಬಿಸಿದೆ.
ಈ ಇಬ್ಬರಿಗೆ ಎಲ್‌ಪಿಎಲ್-2023ರ ಟೂರ್ನಿಯ ಅಂತ್ಯದಲ್ಲಿ ಕೋವಿಡ್-19 ಸೋಂಕು ತಗಲಿದೆ ಎಂದು ಶ್ರೀಲಂಕಾದ ಟೀಮ್ ಮ್ಯಾನೇಜ್‌ಮೆಂಟ್ ತಿಳಿಸಿದೆ.