ಯುಎಇ ಮಧ್ಯಸ್ಥಿಕೆ | ರಶ್ಯ ಮತ್ತು ಉಕ್ರೇನ್ 95 ಯುದ್ಧ ಕೈದಿಗಳ ವಿನಿಮಯ
ಮಾಸ್ಕೋ : ಯುಎಇ ಮಧ್ಯಸ್ಥಿಕೆಯಲ್ಲಿ ನಡೆದ ಒಪ್ಪಂದದ ಪ್ರಕಾರ ರಶ್ಯ ಮತ್ತು ಉಕ್ರೇನ್ ಗಳು ತಲಾ 95 ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಸ್ವದೇಶಕ್ಕೆ ಹಿಂತಿರುಗುತ್ತಿರುವ ರಶ್ಯದ ಸೇನಾ ಸದಸ್ಯರನ್ನು ಮಿತ್ರದೇಶ ಬೆಲಾರುಸ್ ನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ. ಇವರಲ್ಲಿ ಹೆಚ್ಚಿನವರನ್ನು ಕಸ್ರ್ಕ್ ವಲಯದಲ್ಲಿ ಉಕ್ರೇನ್ ಪಡೆ ಸೆರೆಹಿಡಿದಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರತೀ ಬಾರಿ ಉಕ್ರೇನ್ ತನ್ನ ಜನರನ್ನು ರಶ್ಯದ ಸೆರೆಯಿಂದ ರಕ್ಷಿಸಿದಾಗ, ರಶ್ಯದ ಸೆರೆಯಲ್ಲಿರುವ ಎಲ್ಲರಿಗೂ ಸ್ವಾತಂತ್ರ್ಯವನ್ನು ಹಿಂದಿರುಗಿಸುವ ದಿನಕ್ಕೆ ನಾವು ಹತ್ತಿರವಾಗುತ್ತಿದ್ದೇವೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಬಿಡುಗಡೆಗೊಂಡವರಲ್ಲಿ ಉಕ್ರೇನಿನ ಪತ್ರಕರ್ತ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ ಮ್ಯಾಕ್ಸಿಮ್ ಬುಟ್ಕೆವಿಚ್ ಕೂಡಾ ಸೇರಿದ್ದಾರೆ. ಇದು ಯುದ್ಧ ಆರಂಭವಾಂದಿನಿಂದ 58ನೇ ಯುದ್ಧ ಕೈದಿಗಳ ವಿನಿಮಯ ಪ್ರಕ್ರಿಯೆಯಾಗಿದ್ದು ಇದುವರೆಗೆ 3,767 ಯುದ್ಧಕೈದಿಗಳು ಸ್ವದೇಶಕ್ಕೆ ಮರಳಿದ್ದಾರೆ ಎಂದು ಉಕ್ರೇನ್ ಸಂಸತ್ ನ ಮಾನವ ಹಕ್ಕುಗಳ ಆಯುಕ್ತ ಡಿಮಿಟ್ರೊ ಲ್ಯುಬಿನೆಟ್ಸ್ ಹೇಳಿದ್ದಾರೆ.