ಗಯಾನಾದಲ್ಲಿ ಜನೌಷಧಿ ಕೇಂದ್ರಗಳ ಸ್ಥಾಪನೆ : ಪ್ರಧಾನಿ ಮೋದಿ ಘೋಷಣೆ; 10 ಒಪ್ಪಂದಗಳಿಗೆ ಸಹಿ

Update: 2024-11-21 14:38 GMT

PC : PTI

ಜಾರ್ಜ್‍ಟೌನ್ : ಕೆರಿಬಿಯನ್ ರಾಷ್ಟ್ರ ಗಯಾನಾಕ್ಕೆ ಭಾರತವು ತನ್ನ ಔಷಧೀಯ ಉತ್ಪನ್ನಗಳ ರಫ್ತನ್ನು ಹೆಚ್ಚಿಸಲಿದೆ ಮತ್ತು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎರಡು ದಿನದ ಪ್ರವಾಸದ ಅಂಗವಾಗಿ ಬುಧವಾರ ಗಯಾನಾದ ಜಾರ್ಜ್‍ಟೌನ್ ತಲುಪಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಮಾನ ನಿಲ್ದಾಣದಲ್ಲಿ ಗಯಾನಾದ ಅಧ್ಯಕ್ಷ ಮುಹಮ್ಮದ್ ಇರ್ಫಾನ್ ಆಲಿ ಸ್ವಾಗತ ಕೋರಿದರು. ಗಯಾನಾದ ಅಧ್ಯಕ್ಷ ಇರ್ಫಾನ್ ಆಲಿ ಜತೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಉಭಯ ದೇಶಗಳ ನಡುವೆ ರಕ್ಷಣೆ, ಆಹಾರ ಮತ್ತು ಇಂಧನ ಭದ್ರತೆ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವಿನ ಸಹಕಾರವನ್ನು ಉಲ್ಲೇಖಿಸಿದರು. ಜಾಗತಿಕ ಸಂಸ್ಥೆಗಳ ಸುಧಾರಣೆಯ ಅಗತ್ಯವಿರುವುದಾಗಿ ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಮೋದಿ ಹೇಳಿದರು.

ನಮ್ಮ ಸಂಬಂಧಗಳನ್ನು ಬಲಿಷ್ಠಗೊಳಿಸುವ ಹಲವು ಹೊಸ ಉಪಕ್ರಮಗಳನ್ನು ನಾವು ಗುರುತಿಸಿದ್ದೇವೆ. ಗಯಾನಾದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಗೆ ಭಾರತ ಮಹತ್ವದ ಕೊಡುಗೆ ನೀಡಿದೆ. ಕಳೆದ ವರ್ಷ ರಾಗಿ ನೀಡುವ ಮೂಲಕ ಆಹಾರ ಭದ್ರತೆಗೆ ಕೊಡುಗೆ ನೀಡಿದ್ದೇವೆ. ಇತರ ಬೆಳೆಗಳ ಕೃಷಿಯಲ್ಲೂ ನಾವು ನೆರವಾಗಿದ್ದೇವೆ. ಇವತ್ತು ಸಹಿ ಹಾಕಲಾಗಿರುವ ಕೃಷಿ ಒಪ್ಪಂದ ಪತ್ರವು ನಮ್ಮ ಪ್ರಯತ್ನಗಳನ್ನು ಬಲಪಡಿಸಲಿದೆ.

ಭಾರತದ ಇಂಧನ ಭದ್ರತೆಯಲ್ಲಿ ಗಯಾನಾ ಪ್ರಮುಖ ಪಾತ್ರ ವಹಿಸುತ್ತದೆ. ದೀರ್ಘಾವಧಿಯ ಪಾಲುದಾರಿಕೆಗೆ ನೀಲನಕ್ಷೆಯನ್ನು ಸಿದ್ಧಪಡಿಸಲಾಗುವುದು. ನಾವು ಜಗತ್ತಿನಲ್ಲಿ ಹಸಿರು ಮತ್ತು ಸುಸ್ಥಿರ ಭವಿಷ್ಯದತ್ತ ಸಾಗುತ್ತಿದ್ದೇವೆ. ರಕ್ಷಣೆಯ ಕ್ಷೇತ್ರದಲ್ಲಿ ನಿಕಟ ಸಹಕಾರವು ನಮ್ಮ ನಡುವಿನ ಪರಸ್ಪರ ವಿಶ್ವಾಸದ ಸಂಕೇತವಾಗಿದೆ. ಭಾರತ ಕಳೆದ ವರ್ಷ ಗಯಾನಾಕ್ಕೆ ಎರಡು ಡಾರ್ನಿಯರ್ ವಿಮಾನಗಳನ್ನು ಪೂರೈಸಿದೆ. ಸ್ಕಾಲರ್ ಶಿಪ್ ಮತ್ತು ತರಬೇತಿಯ ಮೂಲಕ ಗಯಾನಾದ ಯೋಧರ ಸಾಮರ್ಥ್ಯ ವೃದ್ಧಿಯಲ್ಲಿ ಕೊಡುಗೆ ನೀಡುವುದನ್ನು ಮುಂದುವರಿಸಲಿದ್ದೇವೆ. ಗಯಾನಾ ಅಧ್ಯಕ್ಷ ಇರ್ಫಾನ್ ಆಲಿ ಅವರು ಭಾರತೀಯ ಸಮುದಾಯದ ದೊಡ್ಡ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

►ಮೋದಿಗೆ ಗಯಾನಾ, ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಗೌರವ ಪ್ರದಾನ

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ನೀಡಿದ ಕೊಡುಗೆಗಳು, ಜಾಗತಿಕ ಸಮುದಾಯಕ್ಕೆ ಅವರ ಅಸಾಧಾರಣ ಕೊಡುಗೆ ಹಾಗೂ ಎರಡು ಕೆರಿಬಿಯನ್ ದೇಶಗಳೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಪ್ರಯತ್ನಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಗಯಾನಾ ಮತ್ತು ಡೊಮಿನಿಕ್ ದೇಶಗಳ ಅತ್ಯುನ್ನತ ರಾಷ್ಟ್ರೀಯ ಗೌರವವನ್ನು ಪ್ರದಾನ ಮಾಡಲಾಯಿತು.

ಗಯಾನಾ ಅಧ್ಯಕ್ಷ ಇರ್ಫಾನ್ ಆಲಿ `ದಿ ಆರ್ಡರ್ ಆಫ್ ಎಕ್ಸಲೆನ್ಸ್' ಗೌರವವನ್ನು ಮೋದಿಗೆ ಪ್ರದಾನ ಮಾಡಿದರು. ಮೋದಿ ಗಯಾನಾದ ಅತ್ಯುನ್ನತ ರಾಷ್ಟ್ರೀಯ ಗೌರವ ಪಡೆದ ನಾಲ್ಕನೇ ವಿದೇಶಿ ನಾಯಕರಾಗಿದ್ದಾರೆ. ಇದಕ್ಕೂ ಮುನ್ನ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಗೌರವವನ್ನು ಪ್ರಧಾನಿ ಮೋದಿಗೆ ಅಧ್ಯಕ್ಷೆ ಸಿಲ್ವೇನಿ ಬರ್ಟನ್ ಪ್ರದಾನ ಮಾಡಿದರು.

ಈ ಗೌರವವನ್ನು ಭಾರತದ ಜನತೆಗೆ ಮತ್ತು ಎರಡೂ ದೇಶಗಳ ಜನರ ನಡುವಿನ ಆಳವಾದ ಐತಿಹಾಸಿಕ ಸಂಬಂಧಕ್ಕೆ ಸಮರ್ಪಿಸುವುದಾಗಿ ಮೋದಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News