ಕೆನಡಾ | ಹಿಂದುಗಳ ವಿರುದ್ಧ ಪ್ರತಿಭಟನೆಗೆ ದಿನಾಂಕ ಘೋಷಿಸಿದ ಖಾಲಿಸ್ತಾನ್ ಗುಂಪು
ಒಟ್ಟಾವ : ಕೆನಡಾದಲ್ಲಿರುವ ಖಾಲಿಸ್ತಾನ್ ಗುಂಪುಗಳು ಹಿಂದುಗಳು ಹಾಗೂ ಹಿಂದು ದೇವಸ್ಥಾನಗಳ ವಿರುದ್ಧ ಹೊಸದಾಗಿ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಒಡ್ಡಿವೆ ಎಂದು ವರದಿಯಾಗಿದೆ.
ಈ ಮಾಹಿತಿ ತಿಳಿದಿದ್ದರೂ ಜಸ್ಟಿನ್ ಟ್ರೂಡೊ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೆನಡಾದಲ್ಲಿನ ಹಿಂದು ಸಮುದಾಯ ಅಸಮಾಧಾನ ವ್ಯಕ್ತಪಡಿಸಿದೆ. ಒಂಟಾರಿಯೊ ಪ್ರಾಂತದ ಓಕ್‍ವಿಲ್ಲೆ ನಗರದ ವೈಸ್ಣೋದೇವಿ ದೇವಸ್ಥಾನದಲ್ಲಿ ನವೆಂಬರ್ 23ರಂದು ಮತ್ತು ಸ್ಕಾರ್‍ಬೊರೊ ನಗರದ ಲಕ್ಷ್ಮೀನಾರಾಯಣ ಮಂದಿರದಲ್ಲಿ ನವೆಂಬರ್ 30ರಂದು ನಡೆಯಲಿರುವ ಜೀವನ ಪ್ರಮಾಣ ಪತ್ರ ನೀಡುವ ಶಿಬಿರಗಳ ವಿರುದ್ಧ ಪ್ರತಿಭಟನೆ ನಡೆಯಲಿದೆ ಎಂದು ಖಾಲಿಸ್ತಾನ್ ಪರ ಗುಂಪು `ಸಿಖ್ಸ್ ಫಾರ್ ಜಸ್ಟಿಸ್(ಎಸ್‍ಎಫ್‍ಜೆ) ಘೋಷಿಸಿದೆ.
ಜೀವನ ಪ್ರಮಾಣ ಪತ್ರ ಶಿಬಿರಗಳ ನೆಪದಲ್ಲಿ ಭಾರತೀಯ ರಾಜತಾಂತ್ರಿಕರು ರಹಸ್ಯ ಮಾಹಿತಿ ಸಂಗ್ರಹಿಸಿ ಕೆನಡಾದಲ್ಲಿರುವ ಸಿಖ್ ಸಮುದಾಯದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್‍ಎಫ್‍ಜೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನೂನ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಈ ಗುಂಪುಗಳು ಹಿಂದುಗಳು ಹಾಗೂ ಭಾರತೀಯ ರಾಜತಾಂತ್ರಿಕರ ವಿರುದ್ಧ ಬಹಿರಂಗ ಬೆದರಿಕೆ ಒಡ್ಡುತ್ತಿದ್ದರೂ ಕೆನಡಾದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಿಂದು ಸಮುದಾಯದವರು ಆತಂಕ ವ್ಯಕ್ತಪಡಿಸಿದ್ದಾರೆ.