ಲಂಚದ ಆರೋಪದ ಬೆನ್ನಲ್ಲೇ ಅದಾನಿ ಸಮೂಹದ ಜೊತೆಗಿನ ಪ್ರಸ್ತಾವಿತ ಒಪ್ಪಂದಗಳನ್ನು ರದ್ದುಗೊಳಿಸಿದ ಕೀನ್ಯಾ
ನೈರೋಬಿ : ಅಮೆರಿಕದಲ್ಲಿ ಗೌತಮ್ ಅದಾನಿ ವಿರುದ್ದ ಲಂಚ ಮತ್ತು ವಂಚನೆ ಆರೋಪದಲ್ಲಿ ದೋಷಾರೋಪಣೆ ಬೆನ್ನಲ್ಲೇ ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ದೇಶದ ಪ್ರಮುಖ ವಿಮಾನ ನಿಲ್ದಾಣದ ನಿಯಂತ್ರಣವನ್ನು ಅದಾನಿ ಗ್ರೂಪ್ ಗೆ ಹಸ್ತಾಂತರಿಸುವ ಆದೇಶವನ್ನು ರದ್ದುಗೊಳಿಸಿದ್ದಾರೆ.
ಇದಲ್ಲದೆ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಕೀನ್ಯಾ ಇಂಧನ ಸಚಿವಾಲಯ ಅದಾನಿ ಗ್ರೂಪ್ ಜೊತೆ ಮಾಡಿಕೊಂಡಿದ್ದ 30 ವರ್ಷಗಳ 736 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ರದ್ದುಗೊಳಿಸುವಂತೆ ಕೀನ್ಯಾ ಅಧ್ಯಕ್ಷರು ಆದೇಶವನ್ನು ಹೊರಡಿಸಿದ್ದಾರೆ.
ಕೀನ್ಯಾದ ನೈರೋಬಿಯ ಜೋಮೊ ಕೆನ್ಯಾಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(ಜೆಕೆಐಎ) ಅದಾನಿ ಸಮೂಹಕ್ಕೆ ಗುತ್ತಿಗೆ ನೀಡುವ ಕೀನ್ಯಾ ಸರ್ಕಾರದ ನಿರ್ಧಾರದ ವಿರುದ್ಧ ಈ ಮೊದಲು ಕಾನೂನು ಹೋರಾಟಗಳು ನಡೆದಿದ್ದವು. ಇದಲ್ಲದೆ ಭಾರತದ ಅದಾನಿ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಕೀನ್ಯಾ ಸರಕಾರದ ನಡುವಿನ 1.85 ಬಿಲಿಯನ್ ಮೌಲ್ಯದ ಒಪ್ಪಂದಕ್ಕೆ ಕೀನ್ಯಾದ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು.
ಸೌರ ವಿದ್ಯುತ್ ಗುತ್ತಿಗೆ ವಿಚಾರದಲ್ಲಿ ಯುಎಸ್ ಪ್ರಾಸಿಕ್ಯೂಟರ್ಗಳು ಗೌತಮ್ ಅದಾನಿ ಮತ್ತು ಇತರರ ವಿರುದ್ಧ ಲಂಚ ಮತ್ತು ವಂಚನೆ ಆರೋಪವನ್ನು ಮಾಡಿದ್ದರು. ಇದರ ಬೆನ್ನಲ್ಲೇ ನ್ಯೂಯಾರ್ಕ್ ನ್ಯಾಯಾಲಯ ಉದ್ಯಮಿ ಗೌತಮಿ ಅದಾನಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ.