ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್ ದಾಳಿ ವಿಫಲ: 5 ಡ್ರೋನ್ಗಳನ್ನು ಉರುಳಿಸಿದ ರಶ್ಯನ್ ಪಡೆ
ಉಕ್ರೇನ್: ರಾಜಧಾನಿ ಮಾಸ್ಕೊ ನಗರದ ಮೇಲೆ ಉಕ್ರೇನ್ ಸೇನೆ ನಡೆಸಿದ ಡ್ರೋನ್ ದಾಳಿಯನ್ನು ವಿಫಲಗೊಳಿಸಿರುವುದಾಗಿ ರಶ್ಯದ ಸೇನೆ ಮಂಗಳವಾರ ತಿಳಿಸಿದೆ.
ಯುವೆಗೆನಿ ಪ್ರಿಗೊಝಿನ್ ನೇತೃತ್ವದ ರಶ್ಯದ ಖಾಸಗಿ ಸೇನೆ ವ್ಯಾಗ್ನರ್ ನ ಬಂಡಾಯದ ಘಟನೆಯ ಬಳಿಕ ಉಕ್ರೇನ್ ಮಾಸ್ಕೊ ಮೇಲೆ ನಡೆಸಿದ ಮೊದಲ ದಾಳಿ ಇದಾಗಿದೆ.
ಸಾಮಾನ್ಯವಾಗಿ ರಶ್ಯದ ಅಧಿಕೃತ ಪ್ರಾಂತದ ಒಳಗಿನ ತಾವು ನಡೆಸಿದ ದಾಳಿಗಳ ಬಗ್ಗೆ ಮೌನ ವಹಿಸುವ ಉಕ್ರೇನ್ ಅಧಿಕಾರಿಗಳು, ಮಾಸ್ಕೊ ಮೇಲೆ ನಡೆದ ಡ್ರೋನ್ ದಾಳಿಗೆ ಯಾವುದೇ ಹೊಣೆಗಾರಿಕೆಯನ್ನು ವಹಿಸಿಕೊಂಡಿಲ್ಲವೆಂದು ತಿಳಿದುಬಂದಿದೆ.
ದಾಳಿಗೆ ಯತ್ನಿಸಿದ 5 ಡ್ರೋನ್ಗಳ ಪೈಕಿ ನಾಲ್ಕನ್ನು ಮಾಸ್ಕೊ ಹೊರವಲಯದಲ್ಲಿ ಹೊಡೆದುರುಳಿಸಲಾಗಿದ್ದು, ಇನ್ನೊಂದನ್ನು ಇಲೆಕ್ಟ್ರಾನ್ ಸಮರಕೌಶಲ್ಯ ಸಾಧನಗಳಿಂದ ನಿಷ್ಕ್ರಿಯಗೊಳಿಸಿ, ಕೆಳಗುರುಳಿಸಲಾಗಿದೆ ಎಂದು ರಶ್ಯ ಸೇನಾ ಮೂಲಗಳು ತಿಳಿಸಿವೆ.
ಈ ಮಧ್ಯೆ ಉಕ್ರೇನ್ ಪಡೆಗಳು ತಮ್ಮ ದೇಶದ ದಕ್ಷಿಣ ಹಾಗೂ ಪೂರ್ವ ಭಾಗದಲ್ಲಿ ಬೀಡುಬಿಟ್ಟಿರುವ ರಶ್ಯ ಸೇನಾನೆಲೆಗಳ ಮೇಲೆ ದಾಳಿಯನ್ನು ಮುಂದುವರಿಸಿದೆ.
ಉಕ್ರೇನ್: ಸುಮಿ ನಗರದಲ್ಲಿ ರಶ್ಯದ ಡ್ರೋನ್ ದಾಳಿಗೆ 3 ಬಲಿ
ಸೋಮವಾರ ಈಶಾನ್ಯ ಉಕ್ರೇನ್ನ ನಗರದ ಸುಮಿಯಲ್ಲಿ ಎರಡು ವಸತಿ ಕಟ್ಟಡಗಳ ಮೇಲೆ ರಶ್ಯ ಸೇನೆ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಮೃತಪಟ್ಟು, ಇತರ 21 ಮಂದಿ ಗಾಯಗೊಂಡಿದ್ದಾರೆಂದು ಸ್ಥಳೀಯ ಮೇಯರ್ ಒಲೆಕ್ಸಾಂಡರ್ ಲಿಸೆಂಕೊ ತಿಳಿಸಿದ್ದಾರೆ. ಈ ದಾಳಿಯಿಂದಾಗಿ ಉಕ್ರೇನ್ನ ಭದ್ರತಾಸೇವೆಯ ಪ್ರಾದೇಶಿಕ ಕಚೇರಿಗೂ ಹಾನಿಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ತಿಳಿಸಿದ್ದಾರೆ.