ಉಕ್ರೇನ್‍ಗೆ ಆತ್ಮರಕ್ಷಣೆಯ ಹಕ್ಕು ಇದೆ: ನೇಟೊ
ಬರ್ಲಿನ್: ಆತ್ಮರಕ್ಷಣೆಯ ಕ್ರಮವಾಗಿ ರಶ್ಯದ ಕಸ್ರ್ಕ್ ಗಡಿಪ್ರದೇಶದಲ್ಲಿ ಆಶ್ಚರ್ಯಕರ ಆಕ್ರಮಣವನ್ನು ಆರಂಭಿಸಲು ಉಕ್ರೇನ್‍ಗೆ ಸಂಪೂರ್ಣ ಹಕ್ಕು ಇದೆ. ಇದನ್ನು ನೇಟೊ ಬೆಂಬಲಿಸುತ್ತದೆ ಎಂದು ನೇಟೊ ಮುಖ್ಯಸ್ಥ ಜೆನ್ಸ್ ಸ್ಟಾಲ್ಟನ್‍ಬರ್ಗ್ ಹೇಳಿದ್ದಾರೆ.
ಆಗಸ್ಟ್ 6ರಂದು ಆರಂಭಿಸಿದ್ದ ಅನಿರೀಕ್ಷಿತ ಆಕ್ರಮಣವು ರಶ್ಯವನ್ನು ಗೊಂದಲದಲ್ಲಿ ಕೆಡವಿದೆ. ಈ ಪ್ರಾಂತದ ಸುಮಾರು 1,200 ಚದರ ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ತನ್ನ ಪಡೆ ವಶಕ್ಕೆ ಪಡೆದಿದೆ ಎಂದು ಉಕ್ರೇನ್ ಹೇಳಿದೆ. `ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಈ ಹಕ್ಕು ಗಡಿಭಾಗದಲ್ಲಿಯೂ ಚಾಲ್ತಿಯಲ್ಲಿರುತ್ತದೆ. ಕಸ್ರ್ಕ್‍ನಲ್ಲಿರುವ ರಶ್ಯದ ಯೋಧರು, ಟ್ಯಾಂಕ್‍ಗಳು ಹಾಗೂ ಸೇನಾನೆಲೆಗಳು ಅಂತರರಾಷ್ಟ್ರೀಯ ಕಾನೂನಿನಡಿ ಕಾನೂನುಬದ್ಧ ಗುರಿಗಳಾಗಿವೆ' ಎಂದು ಸ್ಟಾಲ್ಟನ್‍ಬರ್ಗ್ ಹೇಳಿದ್ದಾರೆ.
ಆಕ್ರಮಣದ ಯೋಜನೆ ಬಗ್ಗೆ ಉಕ್ರೇನ್ ನೇಟೊದ ಜತೆ ಪೂರ್ವಭಾವಿಯಾಗಿ ಚರ್ಚೆ ನಡೆಸಿಲ್ಲ ಮತ್ತು ನೇಟೊ ಪಡೆ ಇದರಲ್ಲಿ ಯಾವುದೇ ಪಾತ್ರ ವಹಿಸಿಲ್ಲ ಎಂದ ಅವರು, ಉಕ್ರೇನ್‍ನ ಅತೀ ದೊಡ್ಡ ಯುರೋಪಿಯನ್ ಮಿಲಿಟರಿ ಕೊಡುಗೆದಾರನಾಗಿ ಮುಂದುವರಿಯುವ ಜರ್ಮನಿಯ ಬದ್ಧತೆ ಸ್ವಾಗತಾರ್ಹ ಎಂದಿದ್ದಾರೆ.
ಈ ಮಧ್ಯೆ, ಮುಂದಿನ ವರ್ಷದ ಬಜೆಟ್‍ನಲ್ಲಿ ಉಕ್ರೇನ್‍ಗೆ ನೆರವಿನ ಪ್ರಮಾಣವನ್ನು ಕಡಿತಗೊಳಿಸುವ ಜರ್ಮನ್ ಸರಕಾರದ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಂದೂಕು ಹಾಗೂ ಇತರ ಶಸ್ತ್ರಾಸ್ತ್ರಗಳ ಕೊರತೆ ಎದುರಿಸುತ್ತಿರುವ ಉಕ್ರೇನ್ ಮಿಲಿಟರಿಗೆ ಅಗತ್ಯವಿರುವ ಸಾಧನಗಳನ್ನು ಒದಗಿಸುವುದಾಗಿ ಜರ್ಮನ್ ಛಾನ್ಸಲರ್ ಒಲಾಫ್ ಶಾಲ್ಝ್ ಸರಕಾರ ಸ್ಪಷ್ಟಪಡಿಸಿದೆ.
ಕಸ್ರ್ಕ್ ಪ್ರದೇಶದಲ್ಲಿ ಉಕ್ರೇನ್ ನಡೆಸಿದ ಆಕ್ರಮಣ ಪೂರ್ವ ಉಕ್ರೇನ್‍ನ ಮುಂಚೂಣಿ ರಂಗದಲ್ಲಿ ಸ್ವಲ್ಪ ಬದಲಾವಣೆ ತಂದಿದ್ದರೂ ಈ ವಲಯದಲ್ಲಿ ರಶ್ಯ ಪಡೆ ಕ್ರಮೇಣ ಮುನ್ನಡೆ ಸಾಧಿಸಿದ್ದು ಶುಕ್ರವಾರ ಮೂರು ಗ್ರಾಮಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಡೊನೆಟ್ಸ್ಕ್ ಪ್ರಾಂತದಲ್ಲಿರುವ ಅತ್ಯಂತ ಆಯಕಟ್ಟಿನ ಪೊಕ್ರೋವ್ಸ್ಕ್ ಪ್ರದೇಶದಲ್ಲಿ ತಮ್ಮ ಸೇನೆ ಅತ್ಯಂತ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಒಪ್ಪಿಕೊಂಡಿದ್ದಾರೆ.
►ಕಸ್ರ್ಕ್ ರಕ್ಷಣೆಗೆ ಧಾವಿಸಿದ ರಶ್ಯದ ಬಾಡಿಗೆ ಸಿಪಾಯಿ ಪಡೆ
ಈ ಮಧ್ಯೆ, ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ದೇಶದಲ್ಲಿ ನಿಯೋಜಿಸಿದ್ದ ತನ್ನ ಬಾಡಿಗೆ ಸಿಪಾಯಿಗಳ ಪಡೆ `ಕರಡಿ ಬ್ರಿಗೇಡ್' ಅನ್ನು ಅಲ್ಲಿಂದ ತೆರವುಗೊಳಿಸಿರುವ ರಶ್ಯ, ತಕ್ಷಣ ಕಸ್ರ್ಕ್ ಪ್ರದೇಶಕ್ಕೆ ಧಾವಿಸುವಂತೆ ಸೂಚಿಸಿದೆ.
ಕಸ್ರ್ಕ್‍ನಲ್ಲಿ ಶತ್ರುಗಳ ಆಕ್ರಮಣವನ್ನು ಎದುರಿಸುತ್ತಿರುವ ರಶ್ಯದ ತುಕಡಿಯ ನೆರವಿಗೆ ಧಾವಿಸುವಂತೆ ರಶ್ಯ ಮಿಲಿಟರಿಯಿಂದ ಸೂಚನೆ ಬಂದಿದೆ ಎಂದು ರಶ್ಯದಲ್ಲಿ ಮೆಡ್ವೇಡಿ ಬ್ರಿಗೇಡ್ (ಕರಡಿ ಬ್ರಿಗೇಡ್) ಎಂದು ಕರೆಸಿಕೊಳ್ಳುವ ತುಕಡಿಯ ಕಮಾಂಡರ್ ವಿಕ್ಟರ್ ಯೆರ್ಮೊಲೆವ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಯುದ್ಧವನ್ನು ಅಂತ್ಯಗೊಳಿಸಲು ಉಕ್ರೇನ್ ಬಯಸುತ್ತಿದ್ದು ಸಂಧಾನ ಮಾತುಕತೆಗೆ ಮುಂದಾಗಲಿದೆ ಎಂದು ನಾವು ಭಾವಿಸಿದ್ದೆವು. ಆದರೆ ಕಸ್ರ್ಕ್ ಪ್ರಾಂತ ಪ್ರವೇಶಿಸುವ ಮೂಲಕ ಅವರು ಯುದ್ಧದ ಮಾರ್ಗವನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಕೆಲಸವೂ ಯುದ್ಧ ಮಾಡುವುದೇ ಆಗಿದೆ. ರಶ್ಯದ ಯೋಧನಿಗೆ ತಾಯ್ನಾಡನ್ನು ರಕ್ಷಿಸುವುದು ಅತೀ ದೊಡ್ಡ ಗೌರವದ ಕೆಲಸವಾಗಿದೆ' ಎಂದು ಯೆರ್ಮೊಲೆವ್ ಹೇಳಿದ್ದಾರೆ.
ರಶ್ಯವು ತನ್ನ ಮಿಲಿಟರಿ ಪಡೆಗೆ ಪೂರಕವಾಗಿ ಹಲವು ಬಾಡಿಗೆ ಸಿಪಾಯಿಗಳ ತುಕಡಿಯನ್ನು ಹೊಂದಿದೆ. ಇದೀಗ ನಿಷ್ಕ್ರಿಯಗೊಂಡಿರುವ ವಾಗ್ನರ್ ಗುಂಪು ಈ ಹಿಂದೆ ರಶ್ಯದ ಪ್ರಮುಖ ಬಾಡಿಗೆ ಸಿಪಾಯಿಗಳ ಗುಂಪಾಗಿ ಮಾನ್ಯತೆ ಪಡೆದಿತ್ತು.