ಪ್ರಾದೇಶಿಕ ಸಂಘರ್ಷವನ್ನು ವಿಶ್ವಯುದ್ಧವಾಗಿ ಪರಿವರ್ತಿಸಲು ಉಕ್ರೇನ್ ಪ್ರಯತ್ನ: ರಶ್ಯ ಎಚ್ಚರಿಕೆ

Update: 2023-07-07 18:03 GMT

ಮಾಸ್ಕೊ: ಝಪೋರಿಜಿಯಾ ಪರಮಾಣು ವಿದ್ಯುತ್ ಸ್ಥಾವರದ ಭದ್ರತೆಗೆ ಹಾನಿಯುಂಟು ಮಾಡಲು ರಶ್ಯ ಉದ್ದೇಶಿಸಿದೆ ಎಂಬ ಸುಳ್ಳುನಿರೂಪಣೆಯ ಮೂಲಕ ಈಗ ನಡೆಯುತ್ತಿರುವ ಸಂಘರ್ಷಕ್ಕೆ ನೇಟೊ ಪಡೆಯನ್ನು ಎಳೆದುತರುವುದು ಉಕ್ರೇನ್ನ ಯೋಜನೆಯಾಗಿದ್ದು ಇದರೊಂದಿಗೆ ಪ್ರಾದೇಶಿಕ ಯುದ್ಧವನ್ನು ಮೂರನೇ ವಿಶ್ವ ಯುದ್ಧವಾಗಿ ಪರಿವರ್ತಿಸಲು ಆ ದೇಶ ಪ್ರಯತ್ನಿಸುತ್ತಿದೆ. ಇಂತಹ ಪರಿಸ್ಥಿತಿಯು ಉಂಟು ಮಾಡಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಅಮೆರಿಕ ಎಚ್ಚರಿಕೆ ವಹಿಸಬೇಕು ಎಂದು ರಶ್ಯ ಶುಕ್ರವಾರ ಹೇಳಿದೆ.

ದೊಡ್ಡ ಪ್ರಮಾಣದ ದುರಂತವನ್ನು ತಪ್ಪಿಸಲು ಉಕ್ರೇನ್ ಆಡಳಿತದ ಮೇಲ್ವಿಚಾರಕರು ಜವಾಬ್ದಾರಿಯನ್ನು ನಿರ್ವಹಿಸುವಂತೆ ಮತ್ತು ತಮ್ಮ ಸೇನೆಯ ಮೇಲೆ ಪ್ರಭಾವ ಬೀರುವಂತೆ ನಾವು ಆಗ್ರಹಿಸುತ್ತಿದ್ದೇವೆ. ತಾನು ನಡೆಸುತ್ತಿರುವ ಪ್ರತಿದಾಳಿಗಳು ಘೋರ ವೈಫಲ್ಯ ಕಾಣುತ್ತಿರುವುದರಿಂದ ಹತಾಶರಾಗಿರುವ ಉಕ್ರೇನ್ ಆಧಾರ ರಹಿತ ಹೇಳಿಕೆ ನೀಡುವ ಮೂಲಕ ಈ ಸಂಘರ್ಷಕ್ಕೆ ನೇಟೊವನ್ನು ಎಳೆದುತರಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕದಲ್ಲಿ ರಶ್ಯದ ರಾಯಭಾರಿ ಅನಾಟೊಲಿ ಅಂಟಾನೊವ್ ಪ್ರತಿಪಾದಿಸಿದ್ದಾರೆ.

ಝಪೋರಿಜಿಯಾ ಅಣುಸ್ಥಾವರದ ಮೇಲೆ ಯೋಜಿತ ದಾಳಿಯ ಬಗ್ಗೆ ರಶ್ಯ ಹಾಗೂ ಉಕ್ರೇನ್ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಸ್ಥಾವರದ ಮೇಲೆ ಉಗ್ರರ ದಾಳಿಗೆ ಪ್ರೇರಣೆ ನೀಡಿ ದಾಳಿಯ ಹೊಣೆಯನ್ನು ರಶ್ಯದ ಹಣೆಗೆ ಅಂಟಿಸುವ ಮೂಲಕ ರಶ್ಯದ ಹೆಸರಿಗೆ ಕಳಂಕ ತರಲು ಉಕ್ರೇನ್ ಯೋಜನೆ ರೂಪಿಸಿದೆ. ತಮ್ಮ ಪ್ರತಿದಾಳಿ ವಿಫಲವಾಗುತ್ತಿರುವುದರಿಂದ ನೇಟೊವನ್ನು ನೇರವಾಗಿ ಸಂಘರ್ಷಕ್ಕೆ ಎಳೆದುತರುವುದು ಅದರ ಹುನ್ನಾರವಾಗಿದೆ ಎಂದವರು ಆರೋಪಿಸಿದ್ದಾರೆ.

ಸ್ಥಾವರದ ಛಾವಣಿಯ ಮೇಲೆ ಸ್ಫೋಟಕವನ್ನು ಹೋಲುವ ವಸ್ತು ಪತ್ತೆಯಾಗಿದ್ದು ಬಹುಷಃ ಸ್ಥಾವರದ ಮೇಲೆ ನೇರ ಆಕ್ರಮಣದ ಸಾಧ್ಯತೆಯಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ. ಈ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ. ಝಪೋರಿಜಿಯಾ ಸ್ಥಾವರದ ಮೇಲೆ ಈಗ ರಶ್ಯ ನಿಯಂತ್ರಣ ಸಾಧಿಸಿರುವುದು ಕಳವಳಕಾರಿಯಾಗಿದೆ. ಈ ಪ್ರದೇಶದಲ್ಲಿ ನಡೆಯುವ ಯಾವುದೇ ಕ್ರಮಗಳು ಪರಮಾಣು ಸುರಕ್ಷತೆಗೆ ಧಕ್ಕೆ ತರುವ ಜತೆಗೆ ಸ್ಥಾವರದಲ್ಲಿ ಕಾರ್ಯನಿರ್ವಹಿಸುವ ಉಕ್ರೇನ್ ಪ್ರಜೆಗಳ ಪ್ರಾಣಕ್ಕೆ ಅಪಾಯ ತರುತ್ತಿದೆ.

ಆದ್ದರಿಂದ ಸಂಭಾವ್ಯ ದುರಂತವನ್ನು ತಪ್ಪಿಸಲು ಸ್ಥಾವರದಲ್ಲಿರುವ ತನ್ನ ಭದ್ರತಾ ಸಿಬ್ಬಂದಿಯನ್ನು ರಶ್ಯ ವಾಪಸು ಕರೆಸಿಕೊಂಡು ಅದರ ನಿಯಂತ್ರಣವನ್ನು ಉಕ್ರೇನ್ಗೆ ಮರಳಿಸಬೇಕು ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಆಗ್ರಹಿಸಿದ್ದಾರೆ. ಉದ್ವಿಗ್ನತೆ ಹೆಚ್ಚುತ್ತಿರುವಂತೆ ಉಭಯ ದೇಶಗಳ ನಡುವೆ ಆರೋಪಗಳ ಸುರಿಮಳೆಯಾಗುತ್ತಿದೆ. ಯಾವುದೇ ತಪ್ಪುಗ್ರಹಿಕೆ, ತಪ್ಪು ಲೆಕ್ಕಾಚಾರ ಅಥವಾ ಉದ್ದೇಶಪೂರ್ವಕ ಪ್ರಚೋದನೆಯು ಉಂಟು ಮಾಡಬಹುದಾದ ಪರಿಣಾಮಗಳ ಬಗ್ಗೆ ಅಂತರ್ರಾಷ್ಟ್ರೀಯ ಸಮುದಾಯ ಆತಂಕಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News