ಗಾಝಾದಲ್ಲಿ ಇಸ್ರೇಲ್‍ನಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆ | ವಿಶ್ವಸಂಸ್ಥೆ ಸಮಿತಿ ಕಳವಳ

Update: 2024-09-20 14:41 GMT

PC : PTI

ವಿಶ್ವಸಂಸ್ಥೆ : ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಜಾಗತಿಕ ಒಪ್ಪಂದವನ್ನು ಇಸ್ರೇಲ್ ತೀವ್ರವಾಗಿ ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆಯ ಸಮಿತಿ ಖಂಡಿಸಿದ್ದು ಗಾಝಾದಲ್ಲಿ ಅಕ್ಟೋಬರ್ 7ರಿಂದ ಇಸ್ರೇಲ್‍ನ ಮಿಲಿಟರಿ ಕ್ರಮಗಳು ಮಕ್ಕಳ ಹಕ್ಕುಗಳ ಮೇಲೆ ಮಹಾ ದುರಂತದ ಪರಿಣಾಮವನ್ನು ಬೀರಿದೆ ಎಂದು ವರದಿ ಮಾಡಿದೆ.

ಸರಕಾರದ ಮಿಲಿಟರಿ ಕ್ರಮಗಳಿಂದಾಗಿ ಅಪಾರ ಜೀವಹಾನಿ ಸೇರಿದಂತೆ ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಲ್ಲಿ ಮಕ್ಕಳ ಹಕ್ಕುಗಳ ತೀವ್ರ ಉಲ್ಲಂಘನೆಯಾಗಿರುವುದನ್ನು ಸಮಿತಿ ಬಲವಾಗಿ ಖಂಡಿಸುತ್ತದೆ. ಮಕ್ಕಳ ಘೋರ ಸಾವಿನ ಘಟನೆಗಳು ಐತಿಹಾಸಿಕವಾಗಿ ಅನನ್ಯವಾಗಿದ್ದು ಇದು ಇತಿಹಾಸದಲ್ಲಿ ಕರಾಳ ಘಟನೆಯಾಗಿ ದಾಖಲಾಗಲಿದೆ. ಗಾಝಾದಲ್ಲಿ ನಾವು ನೋಡುತ್ತಿರುವಷ್ಟು ಬೃಹತ್ ಪ್ರಮಾಣದ ಹಕ್ಕುಗಳ ಉಲ್ಲಂಘನೆಯನ್ನು ಈ ಹಿಂದೆಂದೂ ಕಂಡಿಲ್ಲ. ಇವುಗಳು ನಾವು ಹಿಂದೆಂದೂ ನೋಡಿರದ ಗಂಭೀರ ಉಲ್ಲಂಘನೆಯಾಗಿದೆ ಎಂದು ಸಮಿತಿಯ ಉಪಾಧ್ಯಕ್ಷ ಬ್ರಾಗಿ ಗುಡ್‍ಬ್ರಾಂಡ್ಸನ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

1991ರಲ್ಲಿ ಒಪ್ಪಂದವನ್ನು ಅಂಗೀಕರಿಸಿದ್ದ ಇಸ್ರೇಲ್ ಜಿನೆವಾದಲ್ಲಿ ನಡೆದ ವಿಶ್ವಸಂಸ್ಥೆಯ ಕಲಾಪಕ್ಕೆ ಬೃಹತ್ ನಿಯೋಗವನ್ನು ರವಾನಿಸಿತ್ತು. ವಿಚಾರಣೆ ಸಂದರ್ಭ ವಾದ ಮಂಡಿಸಿದ ಇಸ್ರೇಲ್ ನಿಯೋಗ `ಒಪ್ಪಂದವು ಪಶ್ಚಿಮದಂಡೆ ಅಥವಾ ಗಾಝಾದಲ್ಲಿ ಅನ್ವಯಿಸುವುದಿಲ್ಲ ಮತ್ತು ಇಸ್ರೇಲ್ ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸಲು ಬದ್ಧವಾಗಿದೆ. ಗಾಝಾದಲ್ಲಿ ತಾನು ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಹಮಾಸ್ ಅನ್ನು ನಿರ್ಮೂಲನೆಗೊಳಿಸುವ ಗುರಿಯನ್ನು ಹೊಂದಿದೆ' ಎಂದು ಪ್ರತಿಪಾದಿಸಿದೆ. ವಿಶ್ವಸಂಸ್ಥೆ ಕಲಾಪಕ್ಕೆ ಹಾಜರಾಗಿರುವುದಕ್ಕೆ ಇಸ್ರೇಲನ್ನು ಶ್ಲಾಘಿಸಿದ ಸಮಿತಿ `ಆದರೆ ಇಸ್ರೇಲ್ ಸರಕಾರ ತನ್ನ ಕಾನೂನು ಬಾಧ್ಯತೆಗಳನ್ನು ಪದೇಪದೇ ನಿರಾಕರಿಸುತ್ತಿರುವುದಕ್ಕೆ ಆಳವಾಗಿ ವಿಷಾದಿಸುವುದಾಗಿ ಹೇಳಿದೆ.

ವಿಚಾರಣೆಯ ಸಂದರ್ಭ ಹಮಾಸ್‍ನ ಒತ್ತೆಸೆರೆಯಲ್ಲಿ ಇರುವವರೂ ಸೇರಿದಂತೆ ಇಸ್ರೇಲ್‍ನ ಮಕ್ಕಳ ಬಗ್ಗೆಯೂ ಸಮಿತಿ ಹಲವು ಪ್ರಶ್ನೆಗಳನ್ನು ಎತ್ತಿದ್ದು ಇದಕ್ಕೆ ಇಸ್ರೇಲ್ ನಿಯೋಗ ವ್ಯಾಪಕ ಪ್ರತಿಕ್ರಿಯೆ ನೀಡಿದೆ ಎಂದು ವರದಿಯಾಗಿದೆ. ಯುದ್ಧದಿಂದ ಅಂಗವಿಕಲಗೊಂಡ ಅಥವಾ ಗಾಯಗೊಂಡ ಸಾವಿರಾರು ಮಕ್ಕಳಿಗೆ ತುರ್ತು ನೆರವು ನೀಡಲು, ಅನಾಥರಿಗೆ ಬೆಂಬಲ ನೀಡಲು ಮತ್ತು ಗಾಝಾದಿಂದ ವೈದ್ಯಕೀಯ ಉದ್ದೇಶದ ಸ್ಥಳಾಂತರವನ್ನು ಹೆಚ್ಚಿಸಲು ಬೆಂಬಲ ನೀಡುವಂತೆ ಸಮಿತಿಯ ವರದಿ ಇಸ್ರೇಲ್ ಸರಕಾರವನ್ನು ಆಗ್ರಹಿಸಿದೆ.

►18 ಸದಸ್ಯರ ವಿಶ್ವಸಂಸ್ಥೆ ಸಮಿತಿ

18 ಸದಸ್ಯರ ವಿಶ್ವಸಂಸ್ಥೆ ಸಮಿತಿಯು 1989ರ ಮಕ್ಕಳ ಹಕ್ಕುಗಳ ಒಪ್ಪಂದವನ್ನು ದೇಶಗಳು ಅನುಸರಿಸುತ್ತಿವೆಯೇ ಎಂಬುದರ ಮೇಲ್ವಿಚಾರಣೆ ಮಾಡುತ್ತದೆ. ವ್ಯಾಪಕವಾಗಿ ಅಂಗೀಕರಿಸಿದ ಈ ಒಪ್ಪಂದವು ಮಕ್ಕಳನ್ನು ಹಿಂಸೆ ಹಾಗೂ ಇತರ ದೌರ್ಜನ್ಯಗಳಿಂದ ರಕ್ಷಿಸುತ್ತದೆ.

ವಿಶ್ವಸಂಸ್ಥೆಯ ಸಮಿತಿಯು ತನ್ನ ಶಿಫಾರಸುಗಳನ್ನು ಜಾರಿಗೊಳಿಸುವ ಯಾವುದೇ ವಿಧಾನಗಳನ್ನು ಹೊಂದಿಲ್ಲ. ಆದರೂ ದೇಶಗಳು ಸಾಮಾನ್ಯವಾಗಿ ಸಮಿತಿಯ ಶಿಫಾರಸುಗಳನ್ನು ಅನುಸರಿಸುವ ಗುರಿಯನ್ನು ಹೊಂದಿರುತ್ತವೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News