ಇಸ್ರೇಲ್- ಹಮಾಸ್ ನಡುವೆ ತಕ್ಷಣ ಯುದ್ಧವಿರಾಮ ಜಾರಿಗೆ ಭದ್ರತಾ ಮಂಡಳಿ ನಿರ್ಣಯ
ವಿಶ್ವಸಂಸ್ಥೆ: ಇಸ್ರೇಲ್ ಮತ್ತು ಫೆಲೆಸ್ತೀನ್ ನ ಹಮಾಸ್ ನಡುವೆ ತಕ್ಷಣ ಯುದ್ಧವಿರಾಮ ಜಾರಿಯಾಗಬೇಕು ಹಾಗೂ ಎಲ್ಲಾ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ಒತ್ತಾಯಿಸಿದೆ.
ಅಮೆರಿಕವನ್ನು ಹೊರತುಪಡಿಸಿ, ಭದ್ರತಾ ಮಂಡಳಿಯ ಉಳಿದ 14 ಸದಸ್ಯರು ನಿರ್ಣಯದ ಪರವಾಗಿ ಮತ ಹಾಕಿದರು. ಅಮೆರಿಕವು ಮತದಾನದಿಂದ ದೂರ ಉಳಿಯಿತು.
ಗಾಝಾ ಪಟ್ಟಿಯಲ್ಲಿ ಸುಮಾರು ಆರು ತಿಂಗಳುಗಳಿಂದ ನಡೆಯುತ್ತಿರುವ ಇಸ್ರೇಲ್ ದಾಳಿಗೆ ಸಂಬಂಧಿಸಿ ‘‘ಯುದ್ಧವಿರಾಮ’’ ಎಂಬ ಪದ ಬಳಕೆಯನ್ನು ಅಮೆರಿಕ ವಿರೋಧಿಸುತ್ತಿದೆ. ಇದಕ್ಕೂ ಮೊದಲು, ತನ್ನ ಮಿತ್ರ ದೇಶ ಇಸ್ರೇಲನ್ನು ರಕ್ಷಿಸಲು ಅದು ವೀಟೊ ಅಧಿಕಾರವನ್ನೂ ಚಲಾಯಿಸಿತ್ತು.
ಫೆಲೆಸ್ತೀನ್ ನಲ್ಲಿ ಇಸ್ರೇಲ್ ನಡೆಸುತ್ತಿರುವ ಭೀಕರ ದಾಳಿಯಲ್ಲಿ ಈಗಾಗಲೇ 32,000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಹಾಗಾಗಿ, ಗಾಝಾದಲ್ಲಿ ಯುದ್ಧ ವಿರಾಮ ಏರ್ಪಡಬೇಕು ಎಂಬ ಹೆಚ್ಚುತ್ತಿರುವ ಜಾಗತಿಕ ಒತ್ತಡದ ಹಿನ್ನೆಲೆಯಲ್ಲಿ ಮಾರ್ಚ್ 25ರಂದು ನಡೆದ ಮತದಾನಕ್ಕೆ ಅಮೆರಿಕ ಗೈರುಹಾಜರಾಗಿತ್ತು. ಹಾಗಾಗಿ, ಮುಸ್ಲಿಮರ ಪವಿತ್ರ ಉಪವಾಸ ತಿಂಗಳಲ್ಲಿ ತಕ್ಷಣ ಯುದ್ಧವಿರಾಮ ಜಾರಿಗೆ ಬರಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಾಧ್ಯವಾಯಿತು.
ಎಲ್ಲಾ ಒತ್ತೆಯಾಳುಗಳನ್ನು ತಕ್ಷಣ ಮತ್ತು ನಿಶ್ಶರ್ತವಾಗಿ ಬಿಡುಗಡೆಗೊಳಿಸಬೇಕು ಎಂಬುದಾಗಿಯೂ ನಿರ್ಣಯ ಒತ್ತಾಯಿಸಿದೆ. ಅಕ್ಟೋಬರ್ 7ರಂದು ನಡೆಸಿದ ದಾಳಿಯ ವೇಳೆ, ಹಮಾಸ್ 253 ಒತ್ತೆಯಾಳುಗಳನ್ನು ಒಯ್ದಿದೆ ಎಂದು ಇಸ್ರೇಲ್ ಆರೋಪಿಸಿದೆ.
ಇಡೀ ಗಾಝಾ ಪಟ್ಟಿಯಲ್ಲಿರುವ ನಾಗರಿಕರಿಗೆ ರಕ್ಷಣೆ ಒದಗಿಸಬೇಕು ಮತ್ತು ಅವರಿಗೆ ನೀಡಲಾಗುತ್ತಿರುವ ಮಾನವೀಯ ನೆರವಿನ ಹರಿವನ್ನು ವಿಸ್ತರಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದಾಗಿಯೂ ಭದ್ರತಾ ಮಂಡಳಿಯ ನಿರ್ಣಯವು ಒತ್ತಾಯಿಸಿದೆ.
ಇದಕ್ಕೂ ಮೊದಲು, ಗಾಝಾದಲ್ಲಿ ನಡೆಯುತ್ತಿರುವ ಇಸ್ರೇಲ್ ಆಕ್ರಮಣವನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಮೂರು ಬಾರಿ ವೀಟೊ (ತಡೆ) ಚಲಾಯಿಸಿತ್ತು.