ಅಫ್ಘಾನ್ ಗೆ ವಿಶೇಷ ಪ್ರತಿನಿಧಿ ನೇಮಿಸುವ ನಿರ್ಣಯಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಸ್ತು
ವಿಶ್ವಸಂಸ್ಥೆ : ಅಫ್ಘಾನಿಸ್ತಾನ ಮತ್ತು ತಾಲಿಬಾನ್ ಮುಖಂಡರೊಂದಿಗೆ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆ ದೇಶಕ್ಕೆ ವಿಶೇಷ ಪ್ರತಿನಿಧಿಯನ್ನು ನೇಮಿಸಲು ಕರೆ ನೀಡುವ ನಿರ್ಣಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮೋದಿಸಿದೆ.
2021ರ ಆಗಸ್ಟ್ ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಅಫ್ಘಾನಿಸ್ತಾನದೊಂದಿಗೆ ಹೆಚ್ಚಿನ ಸಂಪರ್ಕ ಸಾಧಿಸುವ ಅಗತ್ಯವಿದೆ ಎಂದು ನವೆಂಬರ್ನಲ್ಲಿ ನೀಡಲಾದ ಸ್ವತಂತ್ರ ಮೌಲ್ಯಮಾಪನ ವರದಿಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಯುಎಇ ಮತ್ತು ಜಪಾನ್ ನಿರ್ಣಯವನ್ನು ಮಂಡಿಸಿದ್ದವು. ಸ್ವತಂತ್ರ ವರದಿಯ ಶಿಫಾರಸಿನಂತೆ ಅಫ್ಘಾನ್ ಗೆ ವಿಶೇಷ ಪ್ರತಿನಿಧಿಯನ್ನು, ಪ್ರಮುಖವಾಗಿ ಲಿಂಗ ಸಮಾನತೆ ಮತ್ತು ಮಾನವ ಹಕ್ಕುಗಳ ಬಗ್ಗೆ ಪ್ರಚಾರ ಮಾಡಲು, ನೇಮಿಸುವಂತೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ರನ್ನು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ. ಭದ್ರತಾ ಮಂಡಳಿಯ 13 ಸದಸ್ಯರು ನಿರ್ಣಯದ ಪರ ಮತ ಚಲಾಯಿಸಿದರೆ ರಶ್ಯ ಮತ್ತು ಚೀನಾ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ.
ಸ್ವತಂತ್ರ ಮೌಲ್ಯಮಾಪನವು ಸಂಪರ್ಕ ಮತ್ತು ಸಂವಹನ ಮುಂದುವರಿಸಲು ಒಂದು ಉತ್ತಮ ಆಧಾರವಾಗಿರುವುದಾಗಿ ಯುಎಇ ಮತ್ತು ಜಪಾನ್ ದೃಢವಾಗಿ ನಂಬುತ್ತದೆ. ಹೆಚ್ಚು ಸುಸಂಬದ್ಧ, ಸಂಘಟಿತ ಮತ್ತು ರಚನಾತ್ಮಕ ರೀತಿಯಲ್ಲಿ ಅಂತರಾಷ್ಟ್ರೀಯ ಸಂವಹನವನ್ನು ಹೆಚ್ಚಿಸುವ ಅಗತ್ಯವನ್ನು ನಿರ್ಣಯ ಎತ್ತಿ ತೋರಿಸಿದೆ ಎಂದು ವಿಶ್ವಸಂಸ್ಥೆಯಲ್ಲಿ ಜಪಾನ್ ರಾಯಭಾರಿ ಯಮಸಕಿ ಕಝುಯುಕಿ ಹೇಳಿದ್ದಾರೆ. ತಾಲಿಬಾನ್ ಸರಕಾರಕ್ಕೆ ಯಾವುದೇ ದೇಶ ಅಥವಾ ಜಾಗತಿಕ ಸಂಸ್ಥೆಗಳು ಅಧಿಕೃತವಾಗಿ ಮಾನ್ಯತೆ ನೀಡಿಲ್ಲ.
ಅನಗತ್ಯ: ತಾಲಿಬಾನ್ ಟೀಕೆ
ದೇಶದಲ್ಲಿ ಲಿಂಗ ಸಮಾನತೆ ಮತ್ತು ಮಾನವ ಹಕ್ಕುಗಳ ಪ್ರಚಾರಕ್ಕೆ ವಿಶೇಷ ಪ್ರತಿನಿಧಿಯನ್ನು ನೇಮಿಸುವ ವಿಶ್ವಸಂಸ್ಥೆಯ ಯೋಜನೆ `ಅನವಶ್ಯಕ' ಎಂದು ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಟೀಕಿಸಿದ್ದಾರೆ.
ಅಫ್ಘಾನಿಸ್ತಾನವು ಸಂಘರ್ಷ ವಲಯವಲ್ಲ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಭದ್ರಪಡಿಸಿಕೊಳ್ಳಲು ಸಮರ್ಥವಾಗಿರುವ ಕೇಂದ್ರ ಸರಕಾರದ ಆಡಳಿತದಡಿಯಿದೆ. ಆದ್ದರಿಂದ ವಿಶೇಷ ಪ್ರತಿನಿಧಿಯ ನೇಮಕ ಅನಗತ್ಯವಾಗಿದೆ. ಅಫ್ಘಾನ್ ಸರಕಾರದ ಕಾರ್ಯವಿಧಾನಗಳಿಗೆ ಅಚಲವಾದ ಧಾರ್ಮಿಕ ನಂಬಿಕೆಗಳು, ಸಾಂಸ್ಕೃತಿಕ ಮೌಲ್ಯಗಳು ಮತ್ತು ಅಫ್ಘಾನ್ ಜನರ ರಾಷ್ಟ್ರೀಯ ಹಿತಾಸಕ್ತಿಗಳು ಮಾರ್ಗಸೂಚಿಯಾಗಿವೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅಬ್ದುಲ್ ಖಹಾರ್ ಬಾಲ್ಖಿ ಪ್ರತಿಕ್ರಿಯಿಸಿದ್ದಾರೆ.