ಗಾಝಾ ಕದನ ವಿರಾಮ ಯೋಜನೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಬೆಂಬಲ | ನಿರ್ಣಯದ ಪರ 14 ರಾಷ್ಟ್ರಗಳ ಮತ
ವಿಶ್ವಸಂಸ್ಥೆ: ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನವಿರಾಮಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮುಂದಿರಿಸಿದ ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ಬೆಂಬಲಿಸಿದ್ದು 8 ತಿಂಗಳಿಂದ ಮುಂದುವರಿದಿರುವ ಯುದ್ಧವನ್ನು ಅಂತ್ಯಗೊಳಿಸುವ ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಹಮಾಸ್ ಅನ್ನು ಆಗ್ರಹಿಸಿದೆ.
ರಶ್ಯ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ. ಇತರ ಎಲ್ಲಾ 14 ಸದಸ್ಯರಾಷ್ಟ್ರಗಳೂ ನಿರ್ಣಯದ ಪರ ಮತ ಚಲಾಯಿಸಿವೆ. ಇಂದು ನಾವು ಶಾಂತಿಗಾಗಿ ಮತ ಚಲಾಯಿಸಿದ್ದೇವೆ ಎಂದು ವಿಶ್ವಸಂಸ್ಥೆಗೆ ಅಮೆರಿಕದ ಪ್ರತಿನಿಧಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್ ಮತದಾನದ ಬಳಿಕ ಪ್ರತಿಕ್ರಿಯಿಸಿದ್ದಾರೆ. ಗಾಝಾ ಶಾಂತಿ ಯೋಜನೆಯನ್ನು ಬೈಡನ್ ಮೇ 31ರಂದು ಮುಂದಿರಿಸಿದ್ದು `ಇದು ಇಸ್ರೇಲ್ನ ಪ್ರಸ್ತಾವನೆ' ಎಂದಿದ್ದರು. ಅಮೆರಿಕದ ಕರಡು ನಿರ್ಣಯಕ್ಕೆ ಅನುಮೋದನೆ ದೊರಕಿರುವುದನ್ನು ಸ್ವಾಗತಿಸುವುದಾಗಿ ಹಮಾಸ್ ಹೇಳಿದ್ದು `ನಮ್ಮ ಜನರ ಬೇಡಿಕೆಗಳು ಮತ್ತು ಪ್ರತಿರೋಧಕ್ಕೆ ಅನುಗುಣವಾಗಿರುವ ಯೋಜನೆಯ ಅಂಶಗಳನ್ನು ಅನುಷ್ಠಾನಗೊಳಿಸುವಲ್ಲಿ ಮಧ್ಯವರ್ತಿಗಳೊಂದಿಗೆ ಸಹಕರಿಸಲು ಸಿದ್ಧ' ಎಂದಿದೆ.
ಹೊಸ ಪ್ರಸ್ತಾವನೆಯನ್ನು ಇಸ್ರೇಲ್ ಒಪ್ಪಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದ್ದು ಇದನ್ನು ಹಮಾಸ್ ಕೂಡಾ ಒಪ್ಪಬೇಕೆಂದು ಆಗ್ರಹಿಸಿದೆ. ಎರಡೂ ಕಡೆಯವರು ಯಾವುದೇ ಷರತ್ತುಗಳಿಲ್ಲದೆ, ವಿಳಂಬ ಮಾಡದೆ ಪ್ರಸ್ತಾವನೆಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಕರೆ ನೀಡಿದೆ.
ತಕ್ಷಣದ ಮತ್ತು ಶಾಶ್ವತ ಕದನವಿರಾಮದತ್ತ ಒಂದು ಹೆಜ್ಜೆಯನ್ನು ಸೂಚಿಸುವುದರಿಂದ ನಿರ್ಣಯವನ್ನು ಬೆಂಬಲಿಸುವುದಾಗಿ ಭದ್ರತಾ ಮಂಡಳಿಯಲ್ಲಿರುವ ಏಕೈಕ ಅರಬ್ ಸದಸ್ಯನಾಗಿರುವ ಅಲ್ಜೀರಿಯಾ ಹೇಳಿದೆ. `ಇದು ಫೆಲೆಸ್ತೀನೀಯರಿಗೆ ಭರವಸೆಯ ಕಿರಣವನ್ನು ತೋರಿಸಿದೆ. ಇದು ಹತ್ಯೆಯನ್ನು ನಿಲ್ಲಿಸಲು ಸಕಾಲವಾಗಿದೆ. ಪ್ರಸ್ತಾವಿತ ಕದನ ವಿರಾಮದ ಪ್ರಥಮ ಹಂತದಲ್ಲಿ ಮಾತುಕತೆ 6 ತಿಂಗಳಿಗಿಂತಲೂ ಮುಂದುವರಿದರೆ ಕದನ ವಿರಾಮ ಮುಂದುವರಿಯುತ್ತದೆ ಎಂಬ ಉತ್ತಮ ಅಂಶವಿದೆ' ಎಂದು ವಿಶ್ವಸಂಸ್ಥೆಯಲ್ಲಿ ಅಲ್ಜೀರಿಯಾದ ಪ್ರತಿನಿಧಿ ಅಮರ್ ಬೆಂಜಾಮ ಹೇಳಿದ್ದಾರೆ.
`ಇಸ್ರೇಲ್ ಏನನ್ನು ನಿರ್ಧಿಷ್ಟವಾಗಿ ಒಪ್ಪಿಕೊಂಡಿದೆ? ಎಂದು ರಶ್ಯ ಪ್ರಶ್ನಿಸಿದೆ. ನಿರ್ಣಯದಲ್ಲಿ ಈ ಪ್ರಶ್ನೆಗೆ ಉತ್ತರವಿಲ್ಲ. ಕದನ ವಿರಾಮದ ಬಗ್ಗೆ ಭದ್ರತಾ ಮಂಡಳಿಯು ಅಸ್ಪಷ್ಟ ಮಾನದಂಡಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಬಾರದು' ಎಂದು ವಿಶ್ವಸಂಸ್ಥೆಗೆ ರಶ್ಯದ ರಾಯಭಾರಿ ವ್ಯಾಸಿಲಿ ನೆಬೆಂಝಿಯಾ ಆಗ್ರಹಿಸಿದ್ದು, ನಿರ್ಣಯವನ್ನು ಅರಬ್ ಜಗತ್ತು ಬೆಂಬಲಿಸುತ್ತದೆ ಎಂಬ ಮಾಹಿತಿ ಇರುವುದರಿಂದ ನಿರ್ಣಯವನ್ನು ನಾವು ನಿರ್ಬಂಧಿಸುವುದಿಲ್ಲ(ವೀಟೊ ಚಲಾಯಿಸುವುದಿಲ್ಲ) ಎಂದಿದ್ದಾರೆ.
ಮತದಾನದಲ್ಲಿ ಪಾಲ್ಗೊಂಡಿದ್ದ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ಸಭೆಯನ್ನುದ್ದೇಶಿಸಿ ಮಾತನಾಡಲಿಲ್ಲ. ಅವರ ಬದಲು ಮಾತನಾಡಿದ ಇಸ್ರೇಲ್ನ ಹಿರಿಯ ರಾಯಭಾರಿ ರೆಯುತ್ ಶಪಿರ್ ಬೆನ್ನಫ್ತಾಲಿ `ಗಾಝಾದಲ್ಲಿ ಇಸ್ರೇಲ್ನ ಗುರಿ ಯಾವತ್ತೂ ಸ್ಪಷ್ಟವಾಗಿದೆ. ಎಲ್ಲಾ ಒತ್ತೆಯಾಳುಗಳ ಬಿಡುಗಡೆ, ಹಮಾಸ್ನ ಮಿಲಿಟರಿ ಮತ್ತು ಆಡಳಿತ ಸಾಮರ್ಥ್ಯವನ್ನು ನಾಶಗೊಳಿಸುವುದು ಮತ್ತು ಗಾಝಾವು ಭವಿಷ್ಯದಲ್ಲಿ ಇಸ್ರೇಲ್ಗೆ ಅಪಾಯವಾಗದು ಎಂಬುದನ್ನು ಖಾತರಿಪಡಿಸುವ ಗುರಿಗೆ ಇಸ್ರೇಲ್ ಬದ್ಧವಾಗಿದೆ ಎಂದ ಅವರು `ಯುದ್ಧ ಕೊನೆಗೊಳ್ಳದಂತೆ ಹಮಾಸ್ ತಡೆಯುತ್ತಿದೆ' ಎಂದು ಪ್ರತಿಪಾದಿಸಿದರು.
ಹಮಾಸ್ ಕದನ ವಿರಾಮ ಯೋಜನೆ ಒಪ್ಪಿಕೊಳ್ಳಲಿ: ಅಮೆರಿಕ ಆಗ್ರಹ
ಟೆಲ್ಅವೀವ್ : ಗಾಝಾದಲ್ಲಿ ಕದನ ವಿರಾಮಕ್ಕೆ ಅಮೆರಿಕ ಬೆಂಬಲಿತ ಪ್ರಸ್ತಾವನೆಯ ಪರವಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ ಹಾಕಿರುವುದು ಸ್ವಾಗತಾರ್ಹ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.
ಕದನ ವಿರಾಮ ಯೋಜನೆಗೆ ಭದ್ರತಾ ಮಂಡಳಿ ಅನುಮೋದಿಸಿರುವುದು ಯೋಜನೆಗೆ ಜಾಗತಿಕ ಬೆಂಬಲವನ್ನು ಸೂಚಿಸಿದೆ ಎಂದ ಬ್ಲಿಂಕೆನ್, ಹಮಾಸ್ ಈ ಯೋಜನೆಯನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. `ಎಲ್ಲರೂ ಪರವಾಗಿದ್ದಾರೆ, ಆದರೆ ಒಬ್ಬರ ಹೊರತಾಗಿ. ಅದು ಹಮಾಸ್' ಎಂದು ಇಸ್ರೇಲ್ನಲ್ಲಿ ಉನ್ನತ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಿಂಕೆನ್ ಹೇಳಿದ್ದಾರೆ. ಪ್ರಸ್ತಾವನೆಗೆ ತನ್ನ ಬದ್ಧತೆಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಪುನರುಚ್ಚರಿಸಿದ್ದಾರೆ ಎಂದವರು ಹೇಳಿದ್ದಾರೆ.
ಪ್ರಸ್ತಾವನೆಯನ್ನು ಸ್ವಾಗತಿಸುವುದಾಗಿ ಹಮಾಸ್ ಹೇಳಿದ್ದರೂ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. `ಹಮಾಸ್ ವಿಶ್ವಸಂಸ್ಥೆಯ ನಿರ್ಣಯವನ್ನು ಸ್ವಾಗತಿಸುತ್ತದೆ ಮತ್ತು ಒಪ್ಪಂದದ ವಿಶಾಲ ರೂಪರೇಖೆಯನ್ನು ಬೆಂಬಲಿಸುತ್ತದೆ. ಆದರೆ ಅದನ್ನು ಕಾರ್ಯಗತಗೊಳಿಸಲಾಗುವುದು ಎಂಬ ಭರವಸೆಯನ್ನು ಕಾಯುತ್ತಿದ್ದೇವೆ' ಎಂದು ಹಮಾಸ್ ವಕ್ತಾರ ಜಿಹಾದ್ ತಾಹ ಮಂಗಳವಾರ ಹೇಳಿದ್ದಾರೆ.
`ಇಸ್ರೇಲ್ ಕಡೆಯಿಂದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಕೆಲವು ವಿಷಯಗಳನ್ನು ಅಧ್ಯಯನ ನಡೆಸಲು ಮತ್ತು ಸ್ಪಷ್ಟಪಡಿಸಲು ಪ್ರಯತ್ನ ನಡೆಯುತ್ತಿದೆ. ಆಕ್ರಮಣವನ್ನು ಕೊನೆಗೊಳಿಸಲು ಕಾರಣವಾಗುವ ಅನುಷ್ಠಾನಕ್ಕೆ ಸ್ಪಷ್ಟ ಅನುಮೋದನೆ ಅಥವಾ ಬದ್ಧತೆಯನ್ನು ಇಸ್ರೇಲ್ ನೀಡಿಲ್ಲ ' ಎಂದವರು ಪ್ರತಿಕ್ರಿಯಿಸಿದ್ದಾರೆ.