ಕೊಲಂಬಿಯಾ ವಿವಿ ಹಾಲ್ಗೆ ಪ್ರತಿಭಟನಾಕಾರರಿಂದ ಮರುನಾಮಕರಣ
ವಾಷಿಂಗ್ಟನ್ : ಗಾಝಾ ಯುದ್ಧವನ್ನು ವಿರೋಧಿಸಿ ಮತ್ತು ಫೆಲೆಸ್ತೀನ್ ಬೆಂಬಲಿಸಿ ಅಮೆರಿಕದ ಕೊಲಂಬಿಯಾ ವಿವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದ್ದು ವಿವಿಯ ಶೈಕ್ಷಣಿಕ ಕಟ್ಟಡಕ್ಕೆ ನುಗ್ಗಿದ ಪ್ರತಿಭಟನಾಕಾರರು ಫೆಲೆಸ್ತೀನ್ ಪರ ಬ್ಯಾನರ್ಗಳನ್ನು ಅಳವಡಿಸಿರುವುದಾಗಿ ವರದಿಯಾಗಿದೆ.
ಕೊಲಂಬಿಯಾ ವಿವಿಯ ಹೆಗ್ಗುರುತು ಎನಿಸಿಕೊಂಡಿರುವ ಹ್ಯಾಮಿಲ್ಟನ್ ಹಾಲ್ಗೆ ನುಗ್ಗಿದ ಪ್ರತಿಭಟನಾಕಾರರು ಹಾಲ್ನ ಹೆಸರಿದ್ದ ನಾಮಫಲಕದ ಮೇಲೆ `ಹಿಂದ್ಸ್ ಹಾಲ್' ಎಂದು ಬರೆಯಲಾದ ಬ್ಯಾನರ್ ಅಳವಡಿಸಿದ್ದಾರೆ.
ಕೊಲಂಬಿಯಾ ವಿವಿ ಕ್ಯಾಂಪಸ್ನ ದಕ್ಷಿಣದಲ್ಲಿರುವ ಹ್ಯಾಮಿಲ್ಟನ್ ಹಾಲ್ನ ಬಾಗಿಲಿಗೆ ಕುರ್ಚಿ, ಮೇಜುಗಳನ್ನು ಅಡ್ಡ ಇರಿಸಿ ಪ್ರತಿಭಟನಾಕಾರರು ತಡೆಯೊಡ್ಡಿದ್ದಾರೆ. ಬಳಿಕ ಬಿಳಿಬಣ್ಣದ ಬ್ಯಾನರ್ನಲ್ಲಿ `ಹಿಂದ್ಸ್ ಹಾಲ್' ಎಂದು ಬರೆದು ಹಾಲ್ನ ಕಟ್ಟಡಕ್ಕೆ ನೇತು ಹಾಕಲಾಗಿದೆ. ಇತರ ಕೆಲವರು ಕಟ್ಟಡದ ಹೊರಗೆ ನಿಂತು ಗಾಝಾ ಯುದ್ಧವನ್ನು ವಿರೋಧಿಸಿ ಘೋಷಣೆ ಕೂಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಾಲ್ನ ಒಳಗೆ ನುಗ್ಗುವ ಮುನ್ನ ಪ್ರತಿಭಟನಾಕಾರರು ಹಾಲ್ನ ಗಾಜಿನ ಬಾಗಿಲನ್ನು ಮುರಿದಿದ್ದಾರೆ ಎಂದು ವರದಿಯಾಗಿದೆ.
ವಿವಿಯ ಕ್ಯಾಂಪಸ್ನಲ್ಲಿ ಹಾಕಲಾಗಿರುವ ಟೆಂಟ್ಗಳನ್ನು ತೆರವುಗೊಳಿಸಿ ಪ್ರತಿಭಟನೆ ಕೈಬಿಡಲು ಆಡಳಿತ ಮಂಡಳಿ ವಿಧಿಸಿದ್ದ ಗಡುವು ಸೋಮವಾರ ಮಧ್ಯಾಹ್ನ ಅಂತ್ಯಗೊಂಡಿದ್ದು ಫೆಲೆಸ್ತೀನ್ ಪರ ಪ್ರತಿಭಟನೆ ಮುಂದುವರಿಸಿರುವ ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ವಿವಿಯ ಕ್ಯಾಂಪಸ್ನಲ್ಲಿ ಸುರಕ್ಷತೆಯನ್ನು ಖಾತರಿಪಡಿಸುವ ಪ್ರಯತ್ನದ ಆರಂಭಿಕ ಹಂತವಾಗಿ ಆದೇಶ ಪಾಲಿಸದ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗುವುದು. ಮುಂದಿನ ಹಂತದಲ್ಲಿ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕೊಲಂಬಿಯಾ ವಿವಿ ಸಂವಹನ ಉಪಾಧ್ಯಕ್ಷ ಬೆನ್ ಚಾಂಗ್ ಹೇಳಿದ್ದಾರೆ. ಈ ಮಧ್ಯೆ, ತನಗೆ ವಿವಿಯಲ್ಲಿ ನಡೆಯುತ್ತಿರುವ ತರಗತಿಗೆ ಹಾಜರಾಗಲು ಫೆಲೆಸ್ತೀನ್ ಪರ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಅಡ್ಡಿಪಡಿಸಿದ್ದಾರೆ ಎಂದು ಕ್ಯಾಲಿಫೋರ್ನಿಯಾ ವಿವಿಯಲ್ಲಿ ಅಧ್ಯಯನ ನಡೆಸುತ್ತಿರುವ ಯೆಹೂದಿ ವಿದ್ಯಾರ್ಥಿ ಎಲಿ ಸಿವೆಸ್ ಆರೋಪಿಸಿದ್ದು ಈ ಬಗ್ಗೆ ವಿವಿ ಆಡಳಿತ ಮಂಡಳಿಗೆ ದೂರು ನೀಡುವುದಾಗಿ ಹೇಳಿದ್ದಾರೆ.