ಪಾಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ಸಲಕರಣೆ ಪೂರೈಸುತ್ತಿರುವ ಚೀನಾದ 3 ಕಂಪೆನಿಗಳಿಗೆ ಅಮೆರಿಕ ದಿಗ್ಬಂಧನ
ವಾಶಿಂಗ್ಟನ್: ಪಾಕಿಸ್ತಾನದ ಕ್ಷಿಪಣಿ ಕಾರ್ಯಕ್ರಮಕ್ಕೆ ಸಲಕರಣೆಗಳನ್ನು ಪೂರೈಸುತ್ತಿರುವ ನಾಲ್ಕು ಕಂಪೆನಿಗಳಿಗೆ ಅಮೆರಿಕ ದಿಗ್ಬಂಧನೆ ವಿಧಿಸಿದೆ. ‘‘ಪರಮಾಣು ಪ್ರಸರಣ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ’’ ಜಾಲಗಳಿಗೆ ತಡೆಯೊಡ್ಡುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಅಮೆರಿಕದ ಪ್ರಕಟನೆಯೊಂದು ತಿಳಿಸಿದೆ.
ಈ ಪೈಕಿ ನಾಲ್ಕು ಸಂಸ್ಥೆಗಳು ಚೀನಾದಲ್ಲಿದ್ದರೆ, ಒಂದು ಬೆಲಾರುಸ್ನಲ್ಲಿದೆ. ದೀರ್ಘವ್ಯಾಪ್ತಿಯ ಕ್ಷಿಪಣಿ ಕಾರ್ಯಕ್ರಮಗಳು ಸೇರಿದಂತೆ ಪಾಕಿಸ್ತಾನದ ಕ್ಷಿಪಣಿ ಕಾರ್ಯಕ್ರಮಗಳಿಗೆ ಬೇಕಾಗುವ ಸಲಕರಣೆಗಳನ್ನು ಈ ಕಂಪೆನಿಗಳು ಪೂರೈಸುತ್ತಿವೆ.
ಈ ಕಂಪೆನಿಗಳು ನಡೆಸುತ್ತಿರುವ ಚಟುವಟಿಕೆಗಳು ಮತ್ತು ವ್ಯವಹಾರಗಳು, ಪಾಕಿಸ್ತಾನ ನಡೆಸುತ್ತಿರುವ ಸಾಮೂಹಿಕ ವಿನಾಶಕ ಶಸ್ತ್ರಗಳು ಮತ್ತು ಅವುಗಳ ಉಡಾವಣಾ ವ್ಯವಸ್ಥೆಗಳ ಪ್ರಸರಣಕ್ಕೆ ಗಣನೀಯ ಕೊಡುಗೆ ನೀಡುತ್ತಿವೆ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ.
ಅದೂ ಅಲ್ಲದೆ, ಅಂತರ್ರಾಷ್ಟ್ರೀಯ ಪ್ರಸರಣ ನಿಗ್ರಹ ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ಅಮೆರಿಕ ಮತ್ತು ಅದರ ಮಿತ್ರ ದೇಶಗಳು ಬದ್ಧವಾಗಿವೆ. ಈ ನಿಟ್ಟಿನಲ್ಲಿ, ಜಗತ್ತಿನಾದ್ಯಂತ ಸಾಮೂಹಿಕ ವಿನಾಶಕ ಶಸ್ತ್ರಗಳ ಪ್ರಸರಣವನ್ನು ತಡೆದು ಛಿದ್ರಗೊಳಿಸುವ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ದಿಗ್ಬಂಧನೆಗೊಳಗಾದ ಕಂಪೆನಿಗಳು
1. ಬೆಲಾರುಸ್ ನ ಮಿನ್ಸ್ಕ್ ವೀಲ್ ಟ್ರ್ಯಾಕ್ಟರ್ ಪ್ಲ್ಯಾಂಟ್. ಇದು ಪಾಕಿಸ್ತಾನದ ದೀರ್ಘ ವ್ಯಾಪ್ತಿಯ ಕ್ಷಿಪಣಿ ಕಾರ್ಯಕ್ರಮಕ್ಕೆ ವಿಶಿಷ್ಟ ವಾಹನ ವೇದಿಕೆ (ಚಾಸಿಸ್)ಯನ್ನು ಪೂರೈಸುತ್ತಿದೆ. ನ್ಯಾಶನಲ್ ಡೆವೆಲಪ್ಮೆಂಟ್ ಕಾಂಪ್ಲೆಕ್ಸ್ (ಎನ್ಡಿಸಿ) ಅಭಿವೃದ್ಧಿಪಡಿಸುವ ಕ್ಷಿಪಣಿಗಳ ಉಡಾವಣೆಯಲ್ಲಿ ನೆರವು ನೀಡುತ್ತದೆ.
2. ಚೀನಾದ ಕ್ಸಿಯಾನ್ ಲೋಂಗ್ಡೆ ಟೆಕ್ನಾಲಜಿ ಡೆವೆಲಪ್ಮೆಂಟ್ ಕಂಪೆನಿ ಲಿಮಿಟೆಡ್. ಅದು ಪಾಕಿಸ್ತಾನದ ಎನ್ಡಿಸಿಗಾಗಿ ಫಿಲಮೆಂಟ್ ವೈಂಡಿಂಗ್ ಮಶಿನ್ನಂಥ ಕ್ಷಿಪಣಿ ಸಂಬಂಧಿ ಸಲಕರಣೆಗಳನ್ನು ಪೂರೈಸುತ್ತಿದೆ ಎನ್ನಲಾಗಿದೆ. ಇದು ರಾಕೆಟ್ ಮೋಟರ್ ಕೇಸ್ಗಳ ಉತ್ಪಾದನೆಯಗೆ ಅಗತ್ಯವಾಗಿದೆ.
3. ಚೀನಾದ ತಿಯಾಂಜಿನ್ ಕ್ರಿಯೇಟಿವ್ ಸೋರ್ಸ್ ಇಂಟರ್ನ್ಯಾಶನಲ್ ಟ್ರೇಡ್ ಕೊ ಲಿಮಿಟೆಡ್. ಈ ಕಂಪೆನಿಯು ಪಾಕಿಸ್ತಾನದ ಪಕ್ಷೇಪಕ ಕ್ಷಿಪಣಿ ಕಾರ್ಯಕ್ರಮಕ್ಕೆ ಸ್ಟರ್ ವೆಲ್ಡಿಂಗ್ ಎಕ್ವಿಪ್ಮೆಂಟ್ ಮತ್ತು ಲೀನಿಯರ್ ಆ್ಯಕ್ಸಲರೇಟರ್ ಸಿಸ್ಟಮ್ ಒಂದನ್ನು ಪೂರೈಸುತ್ತಿದೆ.
4. ಚೀನಾದ ಗ್ರಾನ್ಪೆಕ್ಟ್ ಕಂಪೆನಿ ಲಿಮಿಟೆಡ್. ಈ ಕಂಪೆನಿಯು ದೊಡ್ಡ ಗಾತ್ರದ ರಾಕೆಟ್ ಮೋಟರ್ಗಳಿಗೆ ಪರೀಕ್ಷಾ ಸಲಕರಣೆಗಳನ್ನು ಪೂರೈಸಲು ಪಾಕಿಸ್ತಾನದ ‘ಸುಪರ್ಕೊ’ ಜೊತೆ ಒಪ್ಪಂದ ಮಾಡಿಕೊಂಡಿದೆ.