ಹೈಟಿಯಲ್ಲಿ ಅರಾಜಕತೆ | ರಾಜತಾಂತ್ರಿಕ ಸಿಬ್ಬಂದಿಗಳನ್ನು ಏರ್ ಲಿಫ್ಟ್ ಮಾಡಿದ ಅಮೆರಿಕ
ನ್ಯೂಯಾರ್ಕ್: ಹೈಟಿಯಲ್ಲಿ ಹಿಂಸಾಚಾರ ಉಲ್ಬಣಿಸಿದ್ದು ಅರಾಜಕತೆ ನೆಲೆಸಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿರುವಂತೆಯೇ ಆ ದೇಶದಲ್ಲಿರುವ ತನ್ನ ರಾಯಭಾರಿ ಕಚೇರಿಯ `ಅನಿವಾರ್ಯವಲ್ಲದ ಸಿಬ್ಬಂದಿಗಳನ್ನು' ಏರ್ ಲಿಫ್ಟ್ ಮಾಡಲು ಅಮೆರಿಕ ವೈಮಾನಿಕ ಕಾರ್ಯಾಚರಣೆ ಆರಂಭಿಸಿದೆ.
ಈ ತಿಂಗಳ ಆರಂಭದಲ್ಲಿ ಶಸ್ತ್ರಧಾರಿ ಕ್ರಿಮಿನಲ್‍ಗಳ ಗುಂಪು ಹೈಟಿಯ ಎರಡು ದೊಡ್ಡ ಜೈಲಿನ ಮೇಲೆ ದಾಳಿ ನಡೆಸಿ ಕೈದಿಗಳನ್ನು ಬಿಡಿಸಿಕೊಂಡು ಪರಾರಿಯಾದ ಬಳಿಕ ದೇಶದ ಹಲವೆಡೆ ಘರ್ಷಣೆ, ಹಿಂಸಾಚಾರ ಉಲ್ಬಣಿಸಿದೆ. ಹೈಟಿಯಲ್ಲಿ ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಪ್ರಧಾನಿ ಆರಿಯಲ್ ಹೆನ್ರಿ ವಿದೇಶ ಪ್ರವಾಸಕ್ಕೆ ತೆರಳಿರುವ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ಪ್ರಧಾನಿಯ ರಾಜೀನಾಮೆಗೆ ಆಗ್ರಹ ಹೆಚ್ಚಿದೆ. ಈ ಮಧ್ಯೆ, ಹೈಟಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಶ್ವಸಂಸ್ಥೆ ನೇತೃತ್ವದ ಶಾಂತಿಪಾಲನಾ ಪಡೆ ನಿಯೋಜನೆಗೆ ಅಂತರರಾಷ್ಟ್ರೀಯ ಸಮುದಾಯ ಕ್ರಮ ಕೈಗೊಳ್ಳಬೇಕೆಂದು ಹೈಟಿ ಸರಕಾರ ಕೋರಿದೆ.
ಹೈಟಿಯಿಂದ ರಾಜತಾಂತ್ರಿಕ ಸಿಬ್ಬಂದಿಗಳನ್ನು ಏರ್ ಲಿಫ್ಟ್ ಮಾಡುವ ಕ್ರಮವು ಜಾಗತಿಕವಾಗಿ ನಡೆಸಿಕೊಂಡು ಬರುತ್ತಿರುವ ಪ್ರಮಾಣಿತ ದೂತಾವಾಸ ಭದ್ರತೆ ಪ್ರಕ್ರಿಯೆಗೆ ಅನುಗುಣವಾಗಿದೆ. ರಾಯಭಾರಿ ಕಚೇರಿಯಲ್ಲಿರುವ `ಅನಿವಾರ್ಯವಲ್ಲದ ಸಿಬ್ಬಂದಿಗಳನ್ನು' ಮಾತ್ರ ಏರ್ ಲಿಫ್ಟ್ ಮಾಡಲಾಗುತ್ತದೆ, ಯಾವುದೇ ಹೈಟಿ ಪ್ರಜೆಗಳು ಇದರಲ್ಲಿ ಒಳಗೊಳ್ಳುವುದಿಲ್ಲ' ಎಂದು ಅಮೆರಿಕದ ದಕ್ಷಿಣ ಕಮಾಂಡ್ ಸ್ಪಷ್ಟಪಡಿಸಿದೆ.
ಭದ್ರತೆಯ ಆತಂಕದ ಹಿನ್ನೆಲೆಯಲ್ಲಿನ ತನ್ನ ನಿಯೋಗದ ಸದಸ್ಯರ ಸಂಖ್ಯೆಯಲ್ಲಿ ಕಡಿತಗೊಳಿಸಲು ನಿರ್ಧರಿಸಿರುವುದಾಗಿ ಯುರೋಪಿಯನ್ ಯೂನಿಯನ್ ಹೇಳಿದೆ. ಜರ್ಮನಿಯೂ ದ್ವೀಪರಾಷ್ಟ್ರದಿಂದ ತನ್ನ ಸಿಬ್ಬಂದಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದೆ. ಹೈಟಿಯಲ್ಲಿ ಹಿಂಸಾಚಾರ ಉಲ್ಬಣಗೊಂಡ ಬಳಿಕ ಸುಮಾರು 3,62,000 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಏಜೆನ್ಸಿಗಳು ವರದಿ ಮಾಡಿವೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಹೈಟಿಯ ಕ್ರಿಮಿನಲ್ ಗ್ಯಾಂಗ್‍ಗಳು ಸರಕಾರದ ಪ್ರಮುಖ ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿಯನ್ನು ಹೆಚ್ಚಿಸಿವೆ. ಆಹಾರ ಧಾನ್ಯಗಳ ಆಮದು-ರಫ್ತಿನಲ್ಲಿ ಪ್ರಮುಖ ಪಾತ್ರ ವಹಿಸುವ ಬಂದರಿನ ಮೇಲೆ ದಾಳಿ ನಡೆಸಿದ ಕ್ರಿಮಿನಲ್ ಗ್ಯಾಂಗ್ ಅಲ್ಲಿ ಸಂಗ್ರಹಿಸಿಟ್ಟಿದ್ದ ಆಹಾರ ಧಾನ್ಯಗಳನ್ನು ಲೂಟಿ ಮಾಡಿರುವುದರಿಂದ ಆಹಾರದ ಕೊರತೆ ಹೆಚ್ಚುವ ಅಪಾಯವಿದೆ. ದೇಶದ ಪ್ರಮುಖ ವಿಮಾನ ನಿಲ್ದಾಣವನ್ನು ಮುಚ್ಚಿರುವುದರಿಂದ ಹೈಟಿಗೆ ಮಾನವೀಯ ನೆರವು ವಿತರಣೆ ಕಾರ್ಯಕ್ಕೆ ತೊಡಕಾಗಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರಕಾರಕ್ಕೆ ನೆರವು ಮುಂದುವರಿಸುವುದಾಗಿ ಅಮೆರಿಕ ಭರವಸೆ ನೀಡಿದೆ ಎಂದು ಉನ್ನತ ಮೂಲಗಳು ಹೇಳಿವೆ.