ಇಸ್ರೇಲ್ ಸೇನೆಯ ಬೆಟಾಲಿಯನ್ ವಿರುದ್ಧ ದಿಗ್ಬಂಧನ ವಿಧಿಸಲು ಅಮೆರಿಕ ಸಜ್ಜು : ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಿಡಿ
ಟೆಲ್ ಅವೀವ್ : ಪಶ್ಚಿಮ ದಂಡೆಯಲ್ಲಿ ನಡೆಸಿದೆ ಎನ್ನಲಾದ ಮಾನವಹಕ್ಕು ಉಲ್ಲಂಘನೆಗಳಿಗಾಗಿ ಇಸ್ರೇಲ್ ಸೇನೆಯ ನೆಟ್ಝಾ ಯೆಹುದ ಬೆಟಾಲಿಯನ್ ವಿರುದ್ಧ ದಿಗ್ಬಂಧನ ವಿಧಿಸಲು ಅಮೆರಿಕ ಸಜ್ಜಾಗಿದೆ.
ಅದೇ ವೇಳೆ, ಅಮೆರಿಕದ ಈ ಕ್ರಮಕ್ಕೆ ಇಸ್ರೇಲ್ ನಾಯಕರು ಬೆಚ್ಚಿಬಿದ್ದಿದ್ದಾರೆ. ಇದು ‘‘ನೈತಿಕ ಅಧಃಪತನ’’ ಎಂಬುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಣ್ಣಿಸಿದ್ದಾರೆ.
ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನ್ ನಾಗರಿಕರ ವಿರುದ್ಧ ನಡೆಸಿದೆಯೆನ್ನಲಾದ ಮಾನವಹಕ್ಕು ಉಲ್ಲಂಘನೆಗಳಿಗಾಗಿ ಇಸ್ರೇಲ್ ರಕ್ಷಣಾ ಪಡೆಗಳ ಘಟಕವೊಂದರ ವಿರುದ್ಧ ಅಮೆರಿಕವು ದಿಗ್ಬಂಧನ ವಿಧಿಸಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ‘ಆಕ್ಸಿಯೋಸ್’ ಶನಿವಾರ ವರದಿ ಮಾಡಿದೆ. ಇಸ್ರೇಲಿ ಸೇನಾ ಘಟಕವೊಂದರ ವಿರುದ್ಧ ಅಮೆರಿಕದ ಬೈಡನ್ ಆಡಳಿತವು ಕ್ರಮವೊಂದನ್ನು ತೆಗೆದುಕೊಳ್ಳಲು ಮುಂದಾಗಿರುವುದು ಇದೇ ಮೊದಲ ಬಾರಿಯಾಗಿದೆ.
ಫೆಲೆಸ್ತೀನೀಯರ ವಿರುದ್ಧ ಹಿಂಸಾಚಾರ ನಡೆಸುತ್ತಿದೆ ಎಂಬ ಆರೋಪವನ್ನು ನೆಟ್ಝಾ ಯೆಹುದ ಹಿಂದೆಯೂ ಎದುರಿಸಿದೆ. ಹೊಸದಾಗಿ, 78 ವರ್ಷದ ಫೆಲೆಸ್ತೀನ್-ಅಮೆರಿಕನ್ ಉಮರ್ ಅಸಾದ್ರನ್ನು ಬೆಟಾಲಿಯನ್ನ ಸೈನಿಕರು ಬಂಧಿಸಿದ ಬಳಿಕ ಅವರು ಮೃತಪಟ್ಟಿದ್ದಾರೆ. ಉಮರ್ ಅಸಾದ್ರ ಕೈಗಳಿಗೆ ಕೋಳ ತೊಡಿಸಲಾಗಿತ್ತು ಮತ್ತು ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು ಎಂದು ಹೇಳಲಾಗಿದೆ. ಬಳಿಕ ಅವರನ್ನು ಶೀತಲ ವಾತಾವರಣದಲ್ಲಿ ರಸ್ತೆ ಬದಿಯಲ್ಲಿ ಎಸೆದು ಹೋಗಲಾಗಿತ್ತು ಎಂದು ‘ಟೈಮ್ಸ್ ಆಫ್ ಇಸ್ರೇಲ್’ ವರದಿ ಮಾಡಿದೆ.
ಅಮೆರಿಕದ ಪ್ರಸ್ತಾಪಿತ ಕ್ರಮಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘‘ಇಂಥ ಕ್ರಮವು ಹುಚ್ಚುತನದ ಪರಮಾವಧಿ ಮತ್ತು ನೈತಿಕ ಅಧಃಪತನವಾಗಿದೆ’’ ಎಂದು ಅವರು ಬಣ್ಣಿಸಿದ್ದಾರೆ.
‘‘ಇಸ್ರೇಲ್ ರಕ್ಷಣಾ ಪಡೆಗಳ ಮೇಲೆ ದಿಗ್ಬಂಧನಗಳನ್ನು ವಿಧಿಸಬಾರದು. ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ನಾಗರಿಕರ ಮೇಲೆ ದಿಗ್ಬಂಧನ ಹೇರಿಕೆಯ ವಿರುದ್ಧವಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಅಮೆರಿಕ ಸರಕಾರದ ಹಿರಿಯ ಅಧಿಕಾರಿಗಳೊಂದಿಗೆ ನಾನು ಮಾತುಕತೆ ನಡೆಸಿದ್ದೇನೆ’’ ಎಂದು ಅವರು ಹೇಳಿದರು.