ಗಾಝಾದಲ್ಲಿ ಇಸ್ರೇಲ್ ಕಾರ್ಯಾಚರಣೆ ಕುರಿತ ಐಸಿಸಿ ತನಿಖೆಗೆ ಅಮೆರಿಕ ವಿರೋಧ

Update: 2024-04-30 17:41 GMT

Photo: NDtv

ವಾಷಿಂಗ್ಟನ್: ಗಾಝಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧಕ್ಕೆ ಸಂಬಂಧಿಸಿದ ಆರೋಪದ ಬಗ್ಗೆ ಐಸಿಸಿ(ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್) ನಡೆಸುತ್ತಿರುವ ತನಿಖೆಯನ್ನು ಅಮೆರಿಕ ವಿರೋಧಿಸಿದೆ.

ಗಾಝಾ ಯುದ್ಧಕ್ಕೆ ಸಂಬಂಧಿಸಿ ಇಸ್ರೇಲ್ನ ಅಧಿಕಾರಿಗಳ ವಿರುದ್ಧ ಐಸಿಸಿ(ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್) ಬಂಧನ ವಾರಂಟ್ ಜಾರಿಗೊಳಿಸಸುವ ಸಾಧ್ಯತೆಯಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಪ್ರಮುಖ ಮುಖಂಡರ ವಿರುದ್ಧ ಬಂಧನ ವಾರಂಟ್ ಜಾರಿಯಾಗಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಜೋ ಬೈಡನ್ಗೆ ಫೋನ್ ಕರೆ ಮಾಡಿ ಮಾತನಾಡಿದ ಬಳಿಕ ಅಮೆರಿಕದ ಪ್ರತಿಕ್ರಿಯೆ ವ್ಯಕ್ತವಾಗಿದೆ. `ಐಸಿಸಿ ತನಿಖೆಯ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ಐಸಿಸಿಯ ವ್ಯಾಪ್ತಿಯಡಿ ಇದು ಬರುವುದಿಲ್ಲ ಎಂಬ ವಿಶ್ವಾಸವಿದೆ. ಆದ್ದರಿಂದ ನಾವು ಇದಕ್ಕೆ ಬೆಂಬಲ ನೀಡುವುದಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರೆ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

`ಇಸ್ರೇಲ್ ಅಧಿಕಾರಿಗಳ ವಿರುದ್ಧ ಐಸಿಸಿ ಬಂಧನ ವಾರಂಟ್ ಜಾರಿಗೊಳಿಸುವುದನ್ನು ತಡೆಯುವಂತೆ ಬೈಡನ್ರನ್ನು ನೆತನ್ಯಾಹು ಕೋರಿದ್ದಾರೆ ಎಂಬ ಮಾಧ್ಯಮಗಳ ವರದಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಜೀನ್-ಪಿಯರೆ `ನೆತನ್ಯಾಹು ಅವರ ದೂರವಾಣಿ ಕರೆಯ ಮುಖ್ಯ ಅಜೆಂಡಾ ಒತ್ತೆಯಾಳು ಒಪ್ಪಂದ, ಕದನ ವಿರಾಮ ಜಾರಿ ಹಾಗೂ ಗಾಝಾಕ್ಕೆ ಮಾನವೀಯ ನೆರವು ಪೂರೈಸುವ ಬಗ್ಗೆ ಕೇಂದ್ರೀಕೃತಗೊಂಡಿತ್ತು' ಎಂದರು.

ಇಸ್ರೇಲ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಗಾಝಾದಲ್ಲಿ ಯುದ್ಧವಿರಾಮ ಮತ್ತು ಒತ್ತೆಯಾಳು ವಿನಿಮಯ ಒಪ್ಪಂದದ ಬಗ್ಗೆ ನಡೆಯುತ್ತಿರುವ ಮಾತುಕತೆಯ ಹಳಿ ತಪ್ಪಬಹುದು ಎಂದು ಅಮೆರಿಕವು ಐಸಿಸಿಗೆ ಎಚ್ಚರಿಕೆ ನೀಡಿದೆ ಎಂಬ ವರದಿಯ ಬಗ್ಗೆಯೂ ಪ್ರತಿಕ್ರಿಯಿಸಲು ಜೀನ್-ಪಿಯರೆ ನಿರಾಕರಿಸಿದ್ದಾರೆ.

`ಸ್ವ-ರಕ್ಷಣೆಗಾಗಿ ಇಸ್ರೇಲ್ನ ಅಂತರ್ಗತ ಹಕ್ಕನ್ನು ಕಡೆಗಣಿಸುವ ಐಸಿಸಿಯ ಯಾವುದೇ ಪ್ರಯತ್ನವನ್ನು ನನ್ನ ನಾಯಕತ್ವದಲ್ಲಿ ಇಸ್ರೇಲ್ ಖಂಡಿತಾ ಒಪ್ಪುವುದಿಲ್ಲ. ಐಸಿಸಿ ಇಸ್ರೇಲ್ನ ಕ್ರಮಗಳ ಮೇಲೆ ಪರಿಣಾಮ ಬೀರದಿದ್ದರೂ ಇದು ಭಯೋತ್ಪಾದನೆ ಮತ್ತು ಉದ್ದೇಶಪೂರ್ವಕ ಆಕ್ರಮಣದ ವಿರುದ್ಧ ಹೋರಾಡುವ ಎಲ್ಲಾ ಪ್ರಜಾಪ್ರಭುತ್ವಗಳ ಸೈನಿಕರು ಮತ್ತು ಅಧಿಕಾರಿಗಳಿಗೆ ಬೆದರಿಕೆ ಹಾಕುವ ಅಪಾಯಕಾರಿ ಪೂರ್ವನಿದರ್ಶನವನ್ನು ಹಾಕಿಕೊಡುತ್ತದೆ' ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.

ತಮ್ಮ ದೇಶ ಕಾನೂನು ಬೆದರಿಕೆಗಳಿಗೆ ತಲೆಬಾಗುವುದಿಲ್ಲ ಎಂದು ಇಸ್ರೇಲ್ನ ವಿದೇಶಾಂಗ ಸಚಿವ ಇಸ್ರೇಲ್ ಕಟ್ಝ್ ಹೇಳಿದ್ದಾರೆ. ವಾರಂಟ್ ಜಾರಿಯಾದರೆ ಇಸ್ರೇಲ್ ಸೇನೆಯ ಕಮಾಂಡರ್ಗಳು ಹಾಗೂ ಯೋಧರಿಗೆ ಹಾನಿಯಾಗಲಿದೆ ಮತ್ತು ಭಯೋತ್ಪಾದಕ ಸಂಘಟನೆಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ ಎಂದವರು ಹೇಳಿದ್ದಾರೆ.

ಇಸ್ರೇಲ್ ಅಥವಾ ಅಮೆರಿಕ ಐಸಿಸಿ ಸದಸ್ಯರಲ್ಲ. ಆದರೆ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಸಂಭಾವ್ಯ ಯುದ್ಧಾಪರಾಧಗಳ ಬಗ್ಗೆ ಇಸ್ರೇಲ್, ಹಮಾಸ್ ಹಾಗೂ ಇತರ ಫೆಲೆಸ್ತೀನ್ ಸಶಸ್ತ್ರ ಗುಂಪುಗಳ ವಿರುದ್ಧ 2021ರಲ್ಲಿ ಐಸಿಸಿ ತನಿಖೆ ಆರಂಭಿಸಿದೆ. ಐಸಿಸಿ ಬಂಧನ ವಾರಂಟ್ ಜಾರಿಗೊಳಿಸಿದರೆ ಅಂತಹ ಮುಖಂಡರು ವಿದೇಶಕ್ಕೆ ಭೇಟಿ ನೀಡಲು ಸಮಸ್ಯೆಯಾಗುತ್ತದೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News