ಪಾಕ್ ತನಿಖಾ ಸಂಸ್ಥೆಗಳಿಂದ ಇಸ್ರೇಲ್‍ನ ಹ್ಯಾಕಿಂಗ್ ತಂತ್ರಜ್ಞಾನ ಬಳಕೆ: ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ; ವರದಿ

Update: 2023-08-03 17:09 GMT

ಜೆರುಸಲೇಂ: ಇಸ್ರೇಲ್‍ನ ಸೈಬರ್ ಟೆಕ್ ಸಂಸ್ಥೆ `ಸೆಲೆಬ್ರೈಟ್'ನ ಆಕ್ರಮಣಕಾರಿ ತಂತ್ರಜ್ಞಾನವನ್ನು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎಫ್‍ಐಎ) ಹಾಗೂ ಇತರ ಹಲವು ಪೊಲೀಸ್ ಘಟಕಗಳು ಬಳಸುತ್ತಿವೆ ಎಂದು ಇಸ್ರೇಲ್‍ನ ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ಇಸ್ರೇಲ್‍ನ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲದಿದ್ದರೂ ಮತ್ತು ಉಭಯ ದೇಶಗಳು ರಾಜತಾಂತ್ರಿಕ ಬಾಂಧವ್ಯ ಹೊಂದಿರದಿದ್ದರೂ ಪಾಕಿಸ್ತಾನದ ತನಿಖಾ ಸಂಸ್ಥೆಗಳು 2021ರಿಂದ ಇಸ್ರೇಲ್‍ನ ಸೈಬರ್ ತಂತ್ರಜ್ಞಾನ ಬಳಸುತ್ತಿದ್ದು ಇದು ಗಂಭೀರ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು ಎಂದು ಹಾರ್ತೆಝ್ ಸುದ್ಧಿಸಂಸ್ಥೆಯ ವರದಿ ಹೇಳಿದೆ.

`ಸೆಲೆಬ್ರೈಟ್' ಸಂಸ್ಥೆಯ ವಿಶಿಷ್ಟ ಉತ್ಪನ್ನವಾದ `ಯುಎಫ್‍ಇಡಿ'ಯನ್ನು `ನಾಸ್ಡಾಕ್' ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದ್ದು ಇದನ್ನು ಬಳಸಿ ಪಾಸ್‍ವರ್ಡ್ ರಕ್ಷಿತ ಸೆಲ್‍ಫೋನ್‍ಗಳನ್ನು ಹ್ಯಾಕ್ ಮಾಡಿ ಅದರಲ್ಲಿ ಸಂಗ್ರಹಗೊಂಡಿರುವ ಮಾಹಿತಿಯನ್ನು ಕಾಪಿ ಮಾಡಬಹುದಾಗಿದೆ. ಚಿತ್ರಗಳು, ದಾಖಲೆಗಳು, ಪಠ್ಯ ಸಂದೇಶಗಳು, ಕರೆ ವಿವರ, ಸಂಪರ್ಕ ಇತ್ಯಾದಿ ಮಾಹಿತಿಯನ್ನು ಪಡೆಯಬಹುದಾಗಿದೆ.

ಇಸ್ರೇಲ್‍ನ ಎನ್‍ಎಸ್‍ಒ ಟೆಕ್ ಸಂಸ್ಥೆಯ ಪೆಗಾಸಸ್ ಹಾಗೂ ಇತರ ಆಕ್ರಮಣಕಾರಿ ಉತ್ಪನ್ನಗಳಂತಲ್ಲದೆ, ಭದ್ರತಾ ಬಳಕೆ ಮತ್ತು ನಾಗರಿಕ ಬಳಕೆ ಎರಡಕ್ಕೂ ಬಳಕೆಯಾಗುವ ಬೂದು ಪ್ರದೇಶದಲ್ಲಿ ಸೆಲೆಬ್ರೈಟ್ ಕಾರ್ಯಾಚರಿಸುತ್ತಿದೆ. ಸೆಲೆಬ್ರೈಟ್‍ನ ಸಿಂಗಾಪುರ ಘಟಕದ ಮೂಲಕ ಉತ್ಪನ್ನಗಳನ್ನು ಪಾಕಿಸ್ತಾನದ ಸಂಸ್ಥೆಗಳು ಹಾಗೂ ಅದರ ಫೆಡರಲ್ ತನಿಖಾ ಸಂಸ್ಥೆಗಳಿಗೆ ನೇರವಾಗಿ ಮಾರಾಟ ಮಾಡಿರುವುದು 2019ರ ಅಂತರಾಷ್ಟ್ರೀಯ ಹಡಗು ಸಾಗಣೆ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಪಾಕಿಸ್ತಾನಕ್ಕೆ ಇಸ್ರೇಲ್‍ನ ತಂತ್ರಜ್ಞಾನ ಉತ್ಪನ್ನಗಳ ಮಾರಾಟಕ್ಕೆ ನಿಷೇಧದ ನಡುವೆಯೂ ಈ ವ್ಯವಹಾರ ನಡೆದಿದೆ.

2012ರಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತದ ಪೊಲೀಸರು ಸೆಲೆಬ್ರೈಟ್‍ನ ಯುಎಫ್‍ಇಡಿ ಉತ್ಪನ್ನಗಳನ್ನು ಪಡೆದಿದ್ದಾರೆ. ಪೊಲೀಸ್ ಘಟಕಗಳು, ಎಫ್‍ಐಎ ನಿಯಮಿತವಾಗಿ ಈ ರಹಸ್ಯ ಸಾಧನವನ್ನು ಬಳಸುತ್ತಿರುವುದನ್ನು ಕಾರ್ಯಾಚರಣಾ ಕೈಪಿಡಿ, ದಾಖಲೆಗಳು ಹಾಗೂ ಖರೀದಿ ಬಿಡ್‍ಗಾಗಿ ಸರಕಾರದ ಅಧಿಸೂಚನೆ ತೋರಿಸಿಕೊಟ್ಟಿದೆ. ಕಠೋರ ಕ್ರೈಬರ್ ಅಪರಾಧ ಕಾನೂನನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಈ ಹಿಂದಿನ ಹಾಗೂ ಈಗಿನ ಎಫ್‍ಐಎ ಅಧಿಕಾರಿಗಳು ಈ ವ್ಯವಸ್ಥೆಗಳನ್ನು ಬಳಸುವ ಬಗ್ಗೆ ತರಬೇತಿ ಪಡೆದಿರುವುದು ಹಾಗೂ ಇವನ್ನು ನಿಯಮಿತವಾಗಿ ಬಳಸುತ್ತಿರುವುದನ್ನು ಪ್ರಮಾಣೀಕರಿಸಿದ್ದಾರೆ ಎಂದು `ಹಾರ್ತೆಝ್' ವರದಿ ಮಾಡಿದೆ.

2021ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತದ ಪೊಲೀಸರು ಸೈಬರ್ ತಂತ್ರಜ್ಞಾನ ಖರೀದಿಗೆ ಆಹ್ವಾನಿಸಿರುವ ಬಿಡ್ಡಿಂಗ್‍ನಲ್ಲಿ 3 ಯುಎಫ್‍ಇಡಿ ಉತ್ಪನ್ನಗಳ ಹೆಸರಿದೆ. ಪೇಷಾವರದ ಭಯೋತ್ಪಾದನಾ ನಿಗ್ರಹ ದಳ ಆಹ್ವಾನಿಸಿರುವ ಬಿಡ್ಡಿಂಗ್‍ನಲ್ಲೂ ಇದರ ಉಲ್ಲೇಖವಿದೆ. 2021ರಲ್ಲಿ ಪಾಕಿಸ್ತಾನದ ನ್ಯಾಷನಲ್ ರೇಡಿಯೊ ಆ್ಯಂಡ್ ಟೆಲಿಕಮ್ಯುನಿಕೇಷನ್ ಕಾಪೊರೇಷನ್(ಎನ್‍ಆರ್‍ಟಿಸಿ)ನ ಬಿಡ್ಡಿಂಗ್‍ನಲ್ಲೂ ಇಸ್ರೇಲ್ ಸೈಬರ್ ಸಾಧನದ ಹೆಸರಿದೆ.

ಸೆಲೆಬ್ರೈಟ್‍ನ ಹ್ಯಾಕಿಂಗ್ ಸಾಧನಗಳು ಕಳೆದ ಹಲವು ವರ್ಷಗಳಿಂದ ಮಾನವ ಹಕ್ಕುಗಳ ಕಾರ್ಯಕರ್ತರು, ಅಲ್ಪಸಂಖ್ಯಾತರು, ತೃತೀಯ ಲಿಂಗಿ ಸಮುದಾಯಗಳನ್ನು ದಮನಿಸುವ ಸಂಘಟನೆಗಳ ಕೈ ಸೇರುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಸಾಧನಗಳನ್ನು ಬಳಸುತ್ತಿರುವವರಲ್ಲಿ ಬಾಂಗ್ಲಾದೇಶದ ಕುಖ್ಯಾತ ಕ್ಷಿಪ್ರ ಕಾರ್ಯಾಚರಣಾ ಘಟಕ, ಬೆಲಾರುಸ್, ಚೀನಾ, ಉಗಾಂಡಾ, ವೆನೆಝುವೆಲಾ, ಇಂಡೊನೇಶ್ಯಾ, ಫಿಲಿಪ್ಪೀನ್ಸ್, ರಶ್ಯ, ಇಥಿಯೋಪಿಯಾದ ಸಂಘಟನೆಗಳು ಮುಂಚೂಣಿಯಲ್ಲಿವೆ ಎಂದು ವರದಿ ಹೇಳಿದೆ.

ಪಾಕಿಸ್ತಾನದ ಭದ್ರತಾ ಸಂಸ್ಥೆಗಳು ಗಂಭೀರ ಪ್ರಮಾಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ನಡೆಸುತ್ತಿವೆ ಎಂದು 2022ರಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಪ್ರಕಟಿಸಿದ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವರದಿಯಲ್ಲಿ ಆರೋಪಿಸಲಾಗಿದೆ. ಇದರ ಜತೆಗೆ, 2016ರಲ್ಲಿ ಪಾಕಿಸ್ತಾನ ಅನುಮೋದಿಸಿದ ಸೈಬರ್ ಅಪರಾಧ ಕಾಯ್ದೆಯು ಆನ್‍ಲೈನ್ ಅಭಿವ್ಯಕ್ತಿ ಸ್ವಾತಂತ್ರ್ಯ(ವಿಶೇಷವಾಗಿ ಸರಕಾರವನ್ನು ಟೀಕಿಸುವುದಕ್ಕೆ) ತೀವ್ರ ಅಂಕುಶ ವಿಧಿಸಿದೆ.

ಇಂತಹ ಪರಿಸ್ಥಿತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಹ್ಯಾಕಿಂಗ್ ಸಾಧನವನ್ನು ಪಾಕಿಸ್ತಾನಕ್ಕೆ ಒದಗಿಸಿರುವುದು ಅಕ್ಷಮ್ಯವಾಗಿದೆ. ಇದನ್ನು ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು, ಸರಕಾರದ ಟೀಕಾಕಾರರ ಹಾಗೂ ಪತ್ರಕರ್ತರ ಹಕ್ಕುಗಳನ್ನು ನಿಬರ್ಂಧಿಸಲು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಗೆ ಬಳಸುವ ಆತಂಕವಿದೆ ಎಂದು ಇಸ್ರೇಲ್‍ನ ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತ ಇಟಾಯ್ ಮ್ಯಾಕ್ ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News