ಉಕ್ರೇನ್ನಲ್ಲಿ ಗೆಲುವಿಗೆ ಪರಮಾಣು ಶಸ್ತ್ರಾಸ್ತ್ರ ಬಳಕೆ ಅಗತ್ಯವಿಲ್ಲ: ಪುಟಿನ್

Update: 2024-06-08 17:18 GMT

ವ್ಲಾದಿಮಿರ್ ಪುಟಿನ್ | Photo : PTI

ಮಾಸ್ಕೋ : ಉಕ್ರೇನ್ನಲ್ಲಿ ರಶ್ಯದ ಗೆಲುವಿಗೆ ಪರಮಾಣು ಶಸ್ತ್ರಾಸ್ತ್ರ ಬಳಸುವ ಅಗತ್ಯವಿಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ಹೇಳಿದ್ದಾರೆ.

ಆದರೆ ಉಕ್ರೇನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರ ಬಳಸುವುದಿಲ್ಲ ಎಂಬ ಬಗ್ಗೆ ರಶ್ಯ ಅಧ್ಯಕ್ಷರಿಂದ ಇನ್ನೂ ಸ್ಪಷ್ಟ ಹೇಳಿಕೆ ಹೊರಬಿದ್ದಿಲ್ಲ. ಇತ್ತೀಚಿನ ದಿನಗಳಲ್ಲಿ ರಶ್ಯ ಪಡೆಗಳು ಪೂರ್ವ ಉಕ್ರೇನ್ನಲ್ಲಿ ಮುನ್ನಡೆ ಸಾಧಿಸಿವೆ. ಸಂಪೂರ್ಣ ಗೆಲುವಿಗೆ ಪರಮಾಣು ಶಸ್ತ್ರಾಸ್ತ್ರ ಬಳಸುವ ಯೋಜನೆಯಿದೆಯೇ ಎಂಬ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಪುಟಿನ್ ` ಇಂತಹ ಶಸ್ತ್ರಾಸ್ತ್ರ ಬಳಸಬೇಕಾದ ಪರಿಸ್ಥಿತಿ ಕಾಣುವುದಿಲ್ಲ. ಆದ್ದರಿಂದ ಜನರು ಪರಮಾಣು ವಿಷಯ ಚರ್ಚಿಸುವುದನ್ನು ನಿಲ್ಲಿಸಬೇಕೆಂದು ಕೋರುತ್ತೇನೆ' ಎಂದರು.

ಆದರೆ ಯಾವ ಪರಿಸ್ಥಿತಿಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎಂದು ಸೂಚಿಸುವ ರಶ್ಯದ ಪರಮಾಣು ನೀತಿಯಲ್ಲಿ ಬದಲಾವಣೆಯ ಸಾಧ್ಯತೆಯನ್ನು ನಿರಾಕರಿಸಲಾಗದು ಎಂದು ಪುಟಿನ್ ಹೇಳಿದ್ದಾರೆ. ಅಗತ್ಯವಿದ್ದರೆ ರಶ್ಯ ಪರಮಾಣು ಅಸ್ತ್ರವನ್ನು ಪರೀಕ್ಷಿಸಬಹುದು, ಆದರೆ ಪ್ರಸ್ತುತ ಅದರ ಅಗತ್ಯ ಕಾಣುವುದಿಲ್ಲ. ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಅಪಾಯದ ಸಂದರ್ಭದಲ್ಲಿ ಈ ಬಗ್ಗೆ ಯೋಚಿಸಬಹುದು ಎಂದರು.

ರಶ್ಯದ ವಿರುದ್ಧದ ಯುದ್ಧದಲ್ಲಿ ರಶ್ಯದೊಳಗೆ ಅಮೆರಿಕದ ಶಸ್ತ್ರಾಸ್ತ್ರಗಳ ಬಳಕೆಗೆ ಇರುವ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸುವುದಾಗಿ ಕಳೆದ ವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪುಟಿನ್ ` ದೀರ್ಘಶ್ರೇಣಿಯ ಪಾಶ್ಚಿಮಾತ್ಯ ಶಸ್ತ್ರಾಸ್ತಗಳೊಂದಿಗೆ ರಶ್ಯದ ಒಳಗೆ ಆಳವಾಗಿ ಪ್ರಹಾರ ನಡೆಸಲು ಉಕ್ರೇನ್ಗೆ ಅವಕಾಶ ನೀಡಿದರೆ ರಶ್ಯವು ತನ್ನ ಸಾಂಪ್ರದಾಯಿಕ ಕ್ಷಿಪಣಿಗಳನ್ನು ಅಮೆರಿಕ ಮತ್ತದರ ಯುರೋಪಿಯನ್ ಮಿತ್ರರನ್ನು ತಲುಪುವಷ್ಟು ದೂರದಲ್ಲಿ ನಿಯೋಜಿಸುತ್ತದೆ' ಎಂದು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News