ಕಿರ್ಗಿಸ್ಥಾನದಲ್ಲಿ ಹಿಂಸಾಚಾರ, ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ: ವರದಿ
ಬಿಷ್ಕೆಕ್ : ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್‍ನಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಹಿಂಸಾಚಾರ ನಡೆಯುತ್ತಿದ್ದು ಪಾಕಿಸ್ತಾನ ಸೇರಿದಂತೆ ವಿದೇಶಿ ವಿದ್ಯಾರ್ಥಿಗಳಿರುವ ಹಾಸ್ಟೆಲ್‍ಗಳ ಮೇಲೆ ಸ್ಥಳೀಯರು ದಾಳಿ ನಡೆಸುತ್ತಿದ್ದು ಆತಂಕದ ವಾತಾವರಣ ನೆಲೆಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ವಿದ್ಯಾರ್ಥಿಗಳಿರುವ ಹಾಸ್ಟೆಲ್ ಮೇಲೆ ದಾಳಿ ನಡೆದಿದ್ದು ಐವರು ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ. ಹಿಂಸಾಚಾರದಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳ ನೆರವಿಗೆ ಸಹಾಯವಾಣಿಯನ್ನು ಆರಂಭಿಸಿರುವುದಾಗಿ ಪಾಕ್ ಸರಕಾರ ಹೇಳಿದೆ.
ರಾಜಧಾನಿ ಬಿಷ್ಕೆಕ್‍ನ ಹಾಸ್ಟೆಲ್‍ನಲ್ಲಿ ಮೇ 13ರಂದು ವಿದೇಶಿ ವಿದ್ಯಾರ್ಥಿಗಳು ಸ್ಥಳೀಯರನ್ನು ಥಳಿಸಿದ್ದು ಇದನ್ನು ಖಂಡಿಸಿ ನಡೆದ ಪ್ರತಿಭಟನೆ ಸಂದರ್ಭ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದಲ್ಲದೆ ವಿದೇಶಿ ವಿದ್ಯಾರ್ಥಿಗಳು ನೆಲೆಸಿರುವ ಕಟ್ಟಡಗಳ ಮೇಲೆ ಪ್ರತೀಕಾರದ ದಾಳಿ ನಡೆಸಿದ್ದಾರೆ . ದಾಳಿಗೆ ಸಂಬಂಧಿಸಿ ಹಲವರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಸ್ಥಳೀಯರ ಮೇಲೆ ಪಾಕಿಸ್ತಾನದ ವಿದ್ಯಾರ್ಥಿಗಳ ಮೇಲೆಯೂ ಹಲ್ಲೆ ನಡೆದಿರುವ ವರದಿಯಾಗಿದ್ದು ಈ ಬಗ್ಗೆ ಇಸ್ಲಾಮಾಬಾದ್‍ನಲ್ಲಿ ಕಿರ್ಗಿಸ್ಥಾನದ ರಾಯಭಾರಿಯನ್ನು ಕರೆಸಿಕೊಂಡು ಪ್ರತಿಭಟನೆಯನ್ನು ಸಲ್ಲಿಸಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಹೇಳಿದೆ.
ಈ ಮಧ್ಯೆ, ಕಿರ್ಗಿಸ್ಥಾನದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಹಾಸ್ಟೆಲ್ ಅಥವಾ ತಮ್ಮ ಕೋಣೆಯಲ್ಲೇ ಇರುವಂತೆ ಮತ್ತು ಭಾರತದ ರಾಯಭಾರಿ ಕಚೇರಿಯ ಜತೆ ನಿರಂತರ ಸಂಪರ್ಕದಲ್ಲಿ ಇರುವಂತೆ ಭಾರತದ ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ. ಕಿರ್ಗಿಸ್ಥಾನದಲ್ಲಿ ಸುಮಾರು 15,000 ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಈಗ ಪರಿಸ್ಥಿತಿ ಶಾಂತವಾಗಿದೆ ಎಂದು ಭಾರತದ ರಾಯಭಾರಿ ಕಚೇರಿ ಹೇಳಿದೆ.
`ಕೆಲವು ವಿದೇಶಿ ಮಾಧ್ಯಮಗಳಲ್ಲಿ ಸುಳ್ಳು ಸುದ್ಧಿ ಪ್ರಸಾರವಾಗುತ್ತಿದೆ. ರಾಜಧಾನಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ ಮತ್ತು ನಿಯಂತ್ರಣದಲ್ಲಿದೆ. ವಿದೇಶಿ ಸರಕಾರಗಳು, ಮಾಧ್ಯಮಗಳು ಸರಕಾರದ ಅಧಿಕೃತ ಸುದ್ಧಿಯನ್ನು ಮಾತ್ರ ಪ್ರಸಾರ ಮಾಡಬೇಕು' ಎಂದು ಕಿರ್ಗಿಸ್ಥಾನದ ವಿದೇಶಾಂಗ ಇಲಾಖೆ ಆಗ್ರಹಿಸಿದೆ. ಬಿಷ್ಕೆಕ್‍ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹಿಂಸಾಚಾರದಲ್ಲಿ ತೊಡಗಿರುವ ಹಲವರನ್ನು ಬಂಧಿಸಲಾಗಿದೆ. ಸುಮಾರು 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಯಾರೂ ಗಂಭೀರ ಗಾಯಗೊಂಡಿಲ್ಲ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.