ಭಾರತ ಸೇರಿದಂತೆ 20 ದೇಶಗಳ ಪ್ರಯಾಣಿಕರಿಗೆ ವೀಸಾಮುಕ್ತ ಪ್ರವೇಶ: ಇಂಡೊನೇಶ್ಯಾದ ಇಲಾಖೆ ಪ್ರಸ್ತಾಪ
ಜಕಾರ್ತ: ಭಾರತ ಸೇರಿದಂತೆ 20 ದೇಶಗಳ ಪ್ರಯಾಣಿಕರಿಗೆ ಉಚಿತ ಪ್ರವೇಶ ವೀಸಾ ಒದಗಿಸುವಂತೆ ಇಂಡೊನೇಶ್ಯಾದ ಪ್ರವಾಸೋದ್ಯಮ ಮತ್ತು ಸೃಜನಶೀಲ ಆರ್ಥಿಕತೆ ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ವರದಿಯಾಗಿದೆ.
ಅಸ್ತಿತ್ವದಲ್ಲಿರುವ ವೀಸಾ ವಿನಾಯಿತಿಗಳನ್ನು ಹೊರತುಪಡಿಸಿ ಅತೀ ಹೆಚ್ಚು ಸಂಖ್ಯೆಯ ವಿದೇಶಿ ಪ್ರವಾಸಿಗರನ್ನು ಹೊಂದಿರುವ 20 ದೇಶಗಳನ್ನು ಸಚಿವಾಲಯ ಪ್ರಸ್ತಾವಿಸಿದೆ. ದೇಶವು ಪ್ರವಾಸಿಗರ ಭೇಟಿಯನ್ನು ಹೆಚ್ಚಿಸುವ ಮತ್ತು ಆರ್ಥಿಕತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವುದರಿಂದ ಈ ಕ್ರಮ ಪೂರಕವಾಗಲಿದೆ ಎಂದು ಇಂಡೊನೇಶ್ಯಾದ ಪ್ರವಾಸೋದ್ಯಮ ಸಚಿವ ಸಾಂದಿಯಾಗ ಸಲಾಹುದ್ದೀನ್ ಉನೊ ಹೇಳಿದ್ದಾರೆ.
20 ದೇಶಗಳಿಗೆ ಉಚಿತ ಪ್ರವೇಶ ವೀಸಾ ಉಪಕ್ರಮವು ವಿದೇಶಿ ಪ್ರವಾಸಿಗರ ಭೇಟಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ ಮತ್ತು ಇದು ಗುಣಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದು ದೇಶೀಯ ಬಳಕೆಯನ್ನು ಹೆಚ್ಚಿಸುತ್ತದೆ, ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ಡಿಜಿಟಲ್ ಆರ್ಥಿಕತೆಯ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ನಾವು ಗುಣಮಟ್ಟದ ಪ್ರವಾಸಿಗರನ್ನು, ವಿಶೇಷವಾಗಿ ದೀರ್ಘಾವಧಿಯ ತಂಗುವಿಕೆ ಮತ್ತು ಸ್ಥಳೀಯ ಅರ್ಥವ್ಯವಸ್ಥೆಯಲ್ಲಿ ಹೆಚ್ಚಿನ ವೆಚ್ಚ ಮಾಡುವವರನ್ನು ಗುರಿಯಾಗಿಸಿಕೊಂಡಿದ್ದೇವೆ. 20 ದೇಶಗಳಲ್ಲಿ ಆಸ್ಟ್ರೇಲಿಯಾ, ಚೀನಾ, ಭಾರತ, ದಕ್ಷಿಣ ಕೊರಿಯಾ, ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಸೇರಿದೆ ಎಂದವರು ಹೇಳಿದ್ದಾರೆ.