ಭಾರತೀಯ ಪ್ರವಾಸಿಗರಿಗೆ ವೀಸಾ ಮನ್ನಾ ಯೋಜನೆ: ದಕ್ಷಿಣ ಆಫ್ರಿಕಾ ಘೋಷಣೆ
ಕೇಪ್‍ಟೌನ್: ಭಾರತ ಮತ್ತು ಚೀನಾದ ಪ್ರವಾಸಿಗರಿಗೆ 90 ದಿನಗಳ ವೀಸಾ ಮನ್ನ ಯೋಜನೆಯನ್ನು ರೂಪಿಸಲಾಗಿದ್ದು 2025ರ ಜನವರಿಯಿಂದ ಜಾರಿಗೆ ಬರಲಿದೆ ಎಂದು ದಕ್ಷಿಣ ಆಫ್ರಿಕಾ ಘೋಷಿಸಿದೆ.
ಯೋಜನೆಯ ಪ್ರಕಾರ, ಗೃಹ ವ್ಯವಹಾರಗಳ ಇಲಾಖೆಯು ದೇಶಕ್ಕೆ ಬರುವ ಪ್ರವಾಸಿಗರಿಗೆ ಗುಂಪು ವೀಸಾಗಳ ಅರ್ಜಿಯನ್ನು ಇಲಾಖೆಯಲ್ಲಿ ನೋಂದಾಯಿಸಿದ ಭಾರತ ಮತ್ತು ಚೀನಾದ ಪ್ರವಾಸ ನಿರ್ವಾಹಕರ ನೆರವಿನಿಂದ ಪರಿಶೀಲಿಸಲಿದೆ. `ದಿ ಟ್ರಸ್ಟೆಡ್ ಟೂರ್ ಆಪರೇಟರ್ ಸ್ಕೀಂ' ಎಂಬ ಈ ಯೋಜನೆಯು ದೇಶವನ್ನು ಪ್ರಮುಖ ಪ್ರವಾಸೀ ತಾಣವಾಗಿಸಲು ನೆರವಾಗಲಿದೆ.
ಪ್ರಸ್ತುತ ದಕ್ಷಿಣ ಆಫ್ರಿಕಾಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರವಾಸಿಗರಲ್ಲಿ ಭಾರತೀಯರ ಪ್ರಮಾಣ ಕೇವಲ 3.9%ರಷ್ಟು ಮಾತ್ರ. ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ, ಸರಳ ಮತ್ತು ಸುಲಭ ವೀಸಾ ಪ್ರಕ್ರಿಯೆಯಿಂದ ಈ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶವಿದೆ. ಭಾರತ ಮತ್ತು ಚೀನಾದ ಪ್ರವಾಸಿಗರು ದೊಡ್ಡ ಗುಂಪುಗಳಲ್ಲಿ ಪ್ರಯಾಣಿಸುವುದಕ್ಕೆ ಆದ್ಯತೆ ನೀಡುವುದರಿಂದ ವೀಸಾ ಮನ್ನಾ ಯೋಜನೆ ಅವರನ್ನು ಆಕರ್ಷಿಸಬಹುದು. ಪ್ರವಾಸೋದ್ಯಮದಲ್ಲಿ 10% ಹೆಚ್ಚಳವಾದರೂ ದೇಶದ ವಾರ್ಷಿಕ ಆರ್ಥಿಕ ಪ್ರಗತಿಯಲ್ಲಿ 0.6% ಏರಿಕೆಯಾಗುತ್ತದೆ ಎಂದು ಗೃಹ ವ್ಯವಹಾರಗಳ ಸಚಿವ ಲಿಯಾನ್ ಶ್ರೈಬರ್ ಹೇಳಿದ್ದಾರೆ.