ರಶ್ಯ-ಉಕ್ರೇನ್ ಶಾಂತಿ ಮಾತುಕತೆಗೆ ಭಾರತ, ಚೀನಾ, ಬ್ರೆಝಿಲ್ ಮಧ್ಯಸ್ಥಿಕೆ ವಹಿಸಬಹುದು: ವ್ಲಾದಿಮಿರ್ ಪುಟಿನ್

Update: 2024-09-05 16:09 GMT

ವ್ಲಾದಿಮಿರ್ ಪುಟಿನ್ | PC : PTI

ಮಾಸ್ಕೋ: ಉಕ್ರೇನ್ ವಿಷಯದಲ್ಲಿ ಸಂಭಾವ್ಯ ಶಾಂತಿ ಮಾತುಕತೆಗೆ ಚೀನಾ, ಭಾರತ ಮತ್ತು ಬ್ರೆಝಿಲ್ ಮಧ್ಯಸ್ಥಿಕೆ ವಹಿಸಬಹುದು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಹೇಳಿದ್ದಾರೆ.

2022ರಲ್ಲಿ ಯುದ್ಧ ಆರಂಭಗೊಂಡ ಪ್ರಥಮ ವಾರದಲ್ಲೇ ಟರ್ಕಿಯಲ್ಲಿ ನಡೆದ ಸಂಧಾನ ಮಾತುಕತೆಯಲ್ಲಿ ಪ್ರಾಥಮಿಕ ಒಪ್ಪಂದಕ್ಕೆ ಬರಲಾಗಿತ್ತು. ಆದರೆ ಅದು ಅನುಷ್ಟಾನಗೊಂಡಿರಲಿಲ್ಲ. ಈಗ ಅದನ್ನು ಮಾತುಕತೆಗೆ ಆಧಾರವಾಗಿ ಪರಿಗಣಿಸಬಹುದು. ಉಕ್ರೇನ್ ಜತೆ ಮಾತುಕತೆಗೆ ತಾನು ಸಿದ್ಧ ಎಂದು ಪುಟಿನ್ ಹೇಳಿರುವುದಾಗಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ವ್ಲದಿವೊಸ್ಟೊಕ್ ನಗರದಲ್ಲಿ ನಡೆದ ರಶ್ಯಾದ ಪೂರ್ವ ಆರ್ಥಿಕ ವೇದಿಕೆಯ ಅಧಿವೇಶನದಲ್ಲಿ ಮಾತನಾಡಿದ ಪುಟಿನ್ `ಅವರೊಂದಿಗೆ ಮಾತುಕತೆಗೆ ನಾವು ಸಿದ್ಧವಿಲ್ಲ ಎಂದು ಯಾವತ್ತೂ ಹೇಳಿಲ್ಲ. ಆದರೆ ಅಲ್ಪಾಯುಷಿ ಬೇಡಿಕೆಗಳು ಇದಕ್ಕೆ ಆಧಾರವಾಗಿರಲು ಸಾಧ್ಯವಿಲ್ಲ. 2022ರಲ್ಲಿ ನಡೆದಿದ್ದ ಮಾತುಕತೆಯಲ್ಲಿ ಒಪ್ಪಿಕೊಂಡಿದ್ದ ಅಂಶಗಳು ಮಾತುಕತೆಗೆ ಆಧಾರವಾಗಿರಬೇಕು' ಎಂದರು. `ಮಾತುಕತೆಯಲ್ಲಿ ಒಪ್ಪಂದವೊಂದಕ್ಕೆ ಬರಲಾಗಿತ್ತು. ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಉಕ್ರೇನ್ ನಿಯೋಗದ ಮುಖ್ಯಸ್ಥ ಈ ಒಪ್ಪಂದಕ್ಕೆ ಸಹಿ ಹಾಕಿರುವ ದಾಖಲೆ ಇದನ್ನು ಪುಷ್ಟೀಕರಿಸುತ್ತದೆ. ಇದರರ್ಥ ಉಕ್ರೇನ್‍ನ ನಿಯೋಗ ಒಪ್ಪಂದದ ಬಗ್ಗೆ ತೃಪ್ತಿ ಹೊಂದಿತ್ತು. ಆದರೆ ಒಪ್ಪಂದದಿಂದ ಹಿಂದೆ ಸರಿಯುವಂತೆ ಅಮೆರಿಕ ಮತ್ತು ಯುರೋಪ್‍ನ ಕೆಲವು ರಾಷ್ಟ್ರಗಳು ಉಕ್ರೇನ್ ಮೇಲೆ ಒತ್ತಡ ಹಾಕಿದವು. ಯಾಕೆಂದರೆ ಇವರು ರಶ್ಯದ ವ್ಯೂಹಾತ್ಮಕ ಸೋಲನ್ನು ಬಯಸಿದ್ದರು' ಎಂದು ಪುಟಿನ್ ಹೇಳಿರುವುದಾಗಿ ವರದಿಯಾಗಿದೆ

ಅಮೆರಿಕದ ಸ್ವಾಗತ:

ಈ ಮಧ್ಯೆ, ಉಕ್ರೇನ್ ಬಿಕ್ಕಟ್ಟು ಅಂತ್ಯಗೊಳಿಸುವ ಪ್ರಯತ್ನದಲ್ಲಿ ನೆರವಾಗಲು ಯಾವುದೇ ರಾಷ್ಟ್ರ ಬಯಸಿದರೂ ಅದನ್ನು ಅಮೆರಿಕ ಸ್ವಾಗತಿಸುತ್ತದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಂವಹನ ಸಲಹೆಗಾರ ಜಾನ್ ಕಿರ್ಬಿ ಹೇಳಿದ್ದಾರೆ.

ಯಾವುದೇ ದೇಶವು ಈ ಯುದ್ಧವನ್ನು ಅಂತ್ಯಗೊಳಿಸುವ ಪ್ರಯತ್ನಕ್ಕೆ ನೆರವಾಗಲು ಬಯಸಿದರೆ ಮತ್ತು ಈ ಪ್ರಯತ್ನ ಅಧ್ಯಕ್ಷ ಝೆಲೆನ್‍ಸ್ಕಿಯ ನಿಲುವಿಗೆ, ಉಕ್ರೇನ್ ಜನರ ಆಶಯಗಳಿಗೆ, ಶಾಂತಿ ಸ್ಥಾಪಿಸುವ ಅವರ ಯೋಜನೆಗೆ ಪೂರಕವಾಗಿದ್ದರೆ ನಾವು ಖಂಡಿತಾ ಇದನ್ನು ಸ್ವಾಗತಿಸುತ್ತೇವೆ. ಶಾಂತಿ ಸ್ಥಾಪನೆಯಲ್ಲಿ ಭಾರತ ಮಹತ್ತರ ಪಾತ್ರ ವಹಿಸಬಹುದು ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News