ಅಮೆರಿಕದ ದಾಳಿಗಳಿಗೆ ಪ್ರತಿಕ್ರಿಯಿಸಲು ಹಿಂಜರಿಯುವುದಿಲ್ಲ: ಇರಾನ್
ಟೆಹ್ರಾನ್: ತನ್ನ ನೆಲದ ಮೇಲೆ ಅಮೆರಿಕ ದಾಳಿ ನಡೆಸಿದರೆ ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ಹಿಂಜರಿಯುವುದಿಲ್ಲ ಎಂದು ಇರಾನ್ ಸೋಮವಾರ ಹೇಳಿದೆ.
ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಮೇಲೆ ಇರಾಕ್ ಮತ್ತು ಸಿರಿಯಾದಲ್ಲಿ ದಾಳಿಯನ್ನು ಮುಂದುವರಿಸಲಾಗುವುದು ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ರವಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಈ ಸಂದರ್ಭ `ಇರಾನ್ ಮೇಲೆ ನೇರವಾಗಿ ದಾಳಿ ನಡೆಸುವ ಸಂಭವ ಇದೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಸುಲ್ಲಿವಾನ್ `ನಾವು ಏನು ಮಾಡಲಿದ್ದೇವೆ ಎಂಬ ಬಗ್ಗೆ ನಾನು ಮಾತನಾಡುವುದು ಸೂಕ್ತವಲ್ಲ. ಆದರೆ ಒಂದು ವೇಳೆ ಇರಾನ್ ನಮ್ಮ ಮೇಲೆ ನೇರವಾಗಿ ಆಕ್ರಮಣ ಮಾಡಿದರೆ ಆಗ ನಮ್ಮ ಕಡೆಯಿಂದ ಸರಿಯಾದ ರೀತಿಯಲ್ಲಿ ಸಶಕ್ತ ಉತ್ತರ ದೊರಕಲಿದೆ' ಎಂದಿದ್ದರು.
ಸುಲಿವಾನ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ನಾಸೆರ್ ಕನ್ನಾನಿ `ತನ್ನ ಭದ್ರತೆ, ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಗೆ ಬೆದರಿಕೆ ಬಂದರೆ ಇರಾನ್ ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತದೆ. ಇರಾನ್ ತನ್ನ ಸಾಮಥ್ರ್ಯವನ್ನು ಬಳಸಲು ಎಂದಿಗೂ ಹಿಂಜರಿಯದು' ಎಂದಿದ್ದಾರೆ.