ಸರ್ಕಾರ ಬೀಳಿಸಿ ಶಾಸಕರನ್ನು ವಿಮಾನದಲ್ಲಿ ಸುತ್ತಾಡಿಸಿದ ಬಿಜೆಪಿಗೆ, ನಾನು ಪ್ರಯಾಣ ಬೆಳೆಸಿದ್ದನ್ನು ವಿರೋಧಿಸುವ ನೈತಿಕತೆ ಇದೆಯೇ?: ಸಿಎಂ ಸಿದ್ದರಾಮಯ್ಯ

Update: 2023-12-22 12:24 GMT

ಬೆಂಗಳೂರು: ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರ ಬೀಳಿಸಿ, ಶಾಸಕರನ್ನು ವಿಶೇಷ ವಿಮಾನದಲ್ಲಿ  ಸುತ್ತಾಡಿಸಿದ ಬಿಜೆಪಿಗೆ, ಬರ ಪರಿಸ್ಥಿತಿ ಸಂಬಂಧ ಪ್ರಧಾನಿ ಅವರ ಜೊತೆ ಚರ್ಚಿಸುವ ಸಲುವಾಗಿ ವಿಶೇಷ ವಿಮಾನದಲ್ಲಿ ನಾನು ಪ್ರಯಾಣ ಬೆಳೆಸಿದ್ದನ್ನು ವಿರೋಧಿಸುವ ನೈತಿಕತೆ ರಾಜ್ಯ ಬಿಜೆಪಿ ನಾಯಕರಿಗೆ  ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಈ ಶುಕ್ರವಾರ ʼಎಕ್ಸ್‌ʼ ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, "ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರ ಬೀಳಿಸಿ, ಶಾಸಕರನ್ನು ವಿಶೇಷ ವಿಮಾನದಲ್ಲಿ ದೆಹಲಿ, ಮುಂಬೈ ಸುತ್ತಾಡಿಸಿದ, ಐಷಾರಾಮಿ ಹೋಟೆಲ್‌ಗಳಲ್ಲಿ ವಾರಗಟ್ಟಲೆ ಠಿಕಾಣಿ ಹಾಕಿಸಿ ಮೋಜು ಮಸ್ತಿಗಾಗಿ ಖರ್ಚು ಮಾಡಿದ ನೂರಾರು ಕೋಟಿ ಹಣ ಬಿಜೆಪಿಯವರು ನರೇಗಾ ಯೋಜನೆಯಲ್ಲಿ ಕೂಲಿ ಮಾಡಿ ಕೂಡಿಟ್ಟದ್ದಲ್ಲ, ರಾಜ್ಯದ ಬಡಜನರು ಕಷ್ಟಪಟ್ಟು ಕಟ್ಟಿದ ತೆರಿಗೆ ಹಣ" ಎಂದು ಹೇಳಿದ್ದಾರೆ.

ʼರಾಜ್ಯದ ಬರ ಪರಿಸ್ಥಿತಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚರ್ಚಿಸುವ ಸಲುವಾಗಿ ವಿಶೇಷ ವಿಮಾನದಲ್ಲಿ ನಾನು ಪ್ರಯಾಣ ಬೆಳೆಸಿದ್ದನ್ನು ವಿರೋಧಿಸುವ ನೈತಿಕತೆ ರಾಜ್ಯ ಬಿಜೆಪಿ ನಾಯಕರಿಗೆ ಇದೆಯೇʼ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

2014ರ ಜೂನ್ 15ರಿಂದ 2023ರ ಸೆಪ್ಟೆಂಬರ್‍‌ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು 74 ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ. ಪ್ರಧಾನಿಗಳ ಅಧಿಕೃತ ತಾಣದ ಅಂಕಿ ಅಂಶಗಳ ಪ್ರಕಾರ ಪ್ರತಿ ಪ್ರವಾಸದ ಸರಾಸರಿ ವೆಚ್ಚ 8.9 ಕೋಟಿ ರೂಪಾಯಿ ಎಂದು ತಿಳಿಸಿದರು.

ದೇಶ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನದಲ್ಲಿದೆ. ದೇಶದ ಜನ ಹಸಿವಿನಿಂದ ಬಳಲುತ್ತಿರುವ ವೇಳೆ ಪ್ರಧಾನಿಗಳು ವಿಶೇಷ ವಿಮಾನದ ಮೂಲಕ ವಿದೇಶ ಯಾತ್ರೆ ಮಾಡಿಕೊಂಡು, ಮೋಜು ಮಾಡುತ್ತಾರೆಂದು ಹೇಳಲು ಬರುತ್ತದೆಯಾ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News