ನ್ಯಾ. ಮೈಕಲ್ ಡಿ. ಕುನ್ಹಾ ವರದಿ: ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2024-11-22 16:39 GMT

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Photo:X)

ಹೊಸದಿಲ್ಲಿ: ಕೋವಿಡ್ ಚಿಕಿತ್ಸೆಗೆ ಸಂಬಂಧಪಟ್ಟ ವರದಿ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ಅವರು ನೀಡಿದ್ದ ವರದಿಗೆ ಸಂಬಂಧಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಇದೀಗ ನ್ಯಾ. ಕುನ್ಹಾ ಅವರಿಗೆ ಪತ್ರ ಬರೆದು ಕ್ಷಮೆ ಕೋರಿದ್ದಾರೆ.

‘ವಾಸ್ತವದಲ್ಲಿ ತಾವೇನು ಮಾತನಾಡಿದ್ದೇನೆಂಬುದರ ಬಗ್ಗೆ ವಿವರಿಸಿ ನ್ಯಾ. ಕುನ್ಹಾ ಅವರಿಗೆ ಪತ್ರ ಬರೆದಿರುವ ಪ್ರಹ್ಲಾದ್ ಜೋಶಿ, ‘ವಿವಾದಾತ್ಮಕ ಹೇಳಿಕೆಯಿಂದ ತಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೆ ಅದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ನನ್ನ ಸುದೀರ್ಘ ವರ್ಷಗಳ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ನ್ಯಾಯಾಂಗದ ಸದಸ್ಯರ ಖ್ಯಾತಿಗೆ ಚ್ಯುತಿ ಬರುವಂತೆ ನಡೆದುಕೊಂಡಿಲ್ಲ ಮತ್ತು ಹೇಳಿಕೆಯನ್ನೂ ನೀಡಿಲ್ಲ. ನಾನು ಇತ್ತೀಚೆಗೆ ನೀಡಿದ ಹೇಳಿಕೆ ಮೇಲ್ನೋಟಕ್ಕೆ ವಿವಾದ ಹುಟ್ಟುಹಾಕಿದೆ. ಆದರೆ, ಯಾವತ್ತೂ ನ್ಯಾಯಾಂಗದ ಸದಸ್ಯರ ಖ್ಯಾತಿ ತಗ್ಗಿಸುವ ಪ್ರವೃತ್ತಿ ತೋರಿಲ್ಲ. ನ್ಯಾಯಾಂಗ ಮತ್ತು ತಮ್ಮ ಬಗ್ಗೆ ಗೌರವವಿದೆ’ ಎಂದು ಜೋಶಿ ತಿಳಿಸಿದ್ದಾರೆ.

ನ್ಯಾಯದಾನದ ಪವಿತ್ರ ಕರ್ತವ್ಯದಲ್ಲಿ ಪ್ರಮುಖ ಪಾತ್ರ ಹೊಂದಿದವರೆಂದು ನಂಬಿದವನಾಗಿದ್ದೇನೆ. ಆದರೆ, ತಮ್ಮ ನೇತೃತ್ವದ ಸಮಿತಿ ವರದಿಯನ್ನು ಉಲ್ಲೇಖಿಸಿ ಇತ್ತೀಚೆಗೆ ನೀಡಿದ ಹೇಳಿಕೆ ಅವಹೇಳನದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕಾಗಿ ತಮ್ಮಲ್ಲಿ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ತರಾತುರಿಯಲ್ಲಿ ವರದಿ ತರಿಸಿಕೊಂಡಿದೆ ಎಂದು ಹೇಳಿದ್ದೇನೆಯೇ ಹೊರತು ತಮ್ಮ ಮೇಲೆ ಯಾವುದೇ ವೈಯಕ್ತಿಕ ಹೇಳಿಕೆ ನೀಡಿಲ್ಲ. ತಮಗೆ ಮತ್ತು ಆಯೋಗಕ್ಕೆ ಅಪಕೀರ್ತಿ ತರಲು ಅಥವಾ ಜನರ ಮನಸ್ಸಿನಲ್ಲಿ ನಿಮ್ಮ ಘನತೆ ಕಡಿಮೆ ಮಾಡುವ ಉದ್ದೇಶ ನನಗೆ ಇರಲಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News