ನಬಾರ್ಡ್ ಸಾಲದ ಮಿತಿ ಕಡಿತದ ಬಗ್ಗೆ ದೇವೇಗೌಡರು ಮೌನವೇಕೆ?: ಸಚಿವ ಎನ್. ಚಲುವರಾಯಸ್ವಾಮಿ ಪ್ರಶ್ನೆ

Update: 2024-11-22 15:54 GMT

ಸಚಿವ ಎನ್. ಚಲುವರಾಯಸ್ವಾಮಿ

ಮಂಡ್ಯ: ನಬಾರ್ಡ್ ಕರ್ನಾಟಕಕ್ಕೆ ನೀಡುತ್ತಿದ್ದ ರಿಯಾಯಿತಿ ದರದ ಸಾಲದ ಮಿತಿಯನ್ನು ಕಡಿತಗೊಳಿಸುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಈ ಬಗ್ಗೆ ಮಾಜಿ ಪ್ರಧಾನಿ ಎಚ್.ದೇವೇಗೌಡರು ಮೌನವಹಿಸಿರುವುದು ಏಕೆ? ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, RBI ಮೂಲಕ ನಬಾರ್ಡ್‍ಗೆ ಹೆಚ್ಚು ಹಣ ನೀಡಿ, ದೇಶದ ಕೃಷಿಕರಿಗೆ ನೆರವಾಗಬೇಕಿದ್ದ ಕೇಂದ್ರ ಸರಕಾರ ಸಾಲದ ಮೊತ್ತವನ್ನು ಶೇ. 50ರಷ್ಟು ಕಡಿತಗೊಳಿಸಿ ರೈತವಿರೋಧಿ ನಿಲುವು ತಾಳಿದೆ. ಈ ಬಗ್ಗೆ ಮಾಜಿ ಪ್ರದಾನಿ ದೇವೇಗೌಡರು ಚಕಾರವೆತ್ತದಿರುವುದು ಈ ನಾಡಿನ ದುರಂತ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ವಿರುದ್ಧ ಹೋರಾಟ ನಡೆಸಿದ್ದ ದೇವೆಗೌಡರು, ಪ್ರಧಾನಿ ನರೇಂದ್ರ ಮೋದಿಯವರ ರೈತ ವಿರೋಧಿ ನಿಲುವಿನ ಬಗ್ಗೆ ಏಕೆ ಮೌನ ತಾಳಿದ್ದಾರೆ? ಕೇಂದ್ರ ಸಚಿವರಾದ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಯಡಿಯೂರಪ್ಪ ಮೌನವಾಗಿರುವ ಗುಟ್ಟೇನು ಎಂದು ಅವರು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ತಾವೇ ಕೈಗೆತ್ತಿಕೊಂಡಿದ್ದ ಬೆಂಗಳೂರಿನ ಹತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಜೆಡಿಎಸ್, ಬಿಜೆಪಿ ಸರಕಾರಗಳು ವಿಫಲವಾಗಿದ್ದವು. ಮತ್ತೆ ಸಿದ್ದರಾಮಯ್ಯ ಅವರ ಸರಕಾರ ಬಂದು ಅದನ್ನು ಪೂರ್ಣಗೊಳಿಸಿದೆ. ಐದು ಗ್ಯಾರಂಟಿ ಯೋಜನೆಗಳು, ಎತ್ತಿನಹೊಳೆ ಯೋಜನೆ ಯೋಜನೆ ಅನುಷ್ಠಾನಗೊಳಿಸಿದ್ದೇವೆ. ಇದು ನಮ್ಮ ಸರಕಾರದ ಸಾಧನೆಯಲ್ಲವೆ? ಎಂದು ಅವರು ತಿರುಗೇಟು ನೀಡಿದರು.

ಜಿಲ್ಲೆಯ ವಿವಿಧೆಡೆ ರೈತರು ಬೆಳೆದಿರುವ ಭತ್ತದ ಬೆಳೆಗೆ ಕೀಟಬಾಧೆ ಕಾಣಿಸಿಕೊಂಡಿದ್ದು, ರೈತರ ನೆರವಿಗೆ ದಾವಿಸಲು ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಚನ್ನಪಟ್ಟಣ, ಸಂಡೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸುವುದು ಖಾತ್ರಿಯಾಗಿದೆ ಎಂದು ಅವರು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

“ಹಿರಿಯರಾದ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ದೊರಕದಿರುವುದರಿಂದ ಬೇಸರ ವ್ಯಕ್ತಪಡಿಸಿದ್ದು, ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರು ಸಚಿವರಾಗಬೇಕೆನ್ನುವುದು ನಮ್ಮ ಜಿಲ್ಲೆಯ ಹಾಲಿ, ಮಾಜಿ ಶಾಸಕರ ಆಗ್ರಹವಾಗಿದೆ. ಮುಂದಿನ ಸಂಪುಟ ವಿಸ್ತರಣೆ ಅಥವಾ ಪುನರಚನೆ ವೇಳೆ ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗಲಿದೆ.”

-ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News