ರೈತರ ಜಮೀನಿನ ಪಹಣಿಯಲ್ಲಿ ಬರೆದ ವಕ್ಫ್‌ ಹೆಸರು ತೆಗೆದುಹಾಕಿ : ಆರ್‌.ಅಶೋಕ್‌ ಆಗ್ರಹ

Update: 2024-11-22 11:37 GMT

PC:x/@RAshokaBJP

ಬೆಂಗಳೂರು : ವಕ್ಫ್‌ ಮಂಡಳಿ ರದ್ದಾಗಬೇಕು, ರೈತರ ಜಮೀನಿನ ಪಹಣಿಯಲ್ಲಿ ಬರೆದ ವಕ್ಫ್‌ ಹೆಸರು ತೆಗೆದುಹಾಕಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವವಿಖ್ಯಾತ ಎಂಜಿನಿಯರ್‌ ಸರ್‌ ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆಯ ಆವರಣವನ್ನು ವಕ್ಫ್‌ ಮಂಡಳಿ ಕಬಳಿಸಿದೆ. ಕೇಂದ್ರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ವಕ್ಫ್‌ ಮಂಡಳಿಗೆ ನ್ಯಾಯಾಂಗದ ಅಧಿಕಾರ ನೀಡಿದೆ. ಇದನ್ನು ಬಳಸಿಕೊಂಡು ವಕ್ಫ್‌ ಮಂಡಳಿ ರೈತರ ಜಮೀನು ನುಂಗುತ್ತಿದೆ. ವಿಧಾನಸೌಧ, ಲಾಲ್‌ಬಾಗ್‌ ಕೂಡ ನಮ್ಮದು ಎಂದು ಇವರು ಹೇಳುತ್ತಾರೆ ಎಂದು ದೂರಿದರು.

ಬೌರಿಂಗ್‌ ಆಸ್ಪತ್ರೆಯದ್ದು 2 ಎಕರೆ ಜಮೀನು ಇದ್ದು, ಅದನ್ನು ಕೂಡ ವಕ್ಫ್‌ ಮಂಡಳಿ ಕಬಳಿಕೆ ಮಾಡಿತ್ತು. ನಾನು ಸಚಿವನಾಗಿದ್ದಾಗ ಅದರ ದಾಖಲೆಗಳನ್ನು ತರಿಸಿ ನೋಡಿದರೆ ಯಾವುದೋ ಹಳೆ ದಾಖಲೆಗಳನ್ನು ತಂದರು. ಬಳಿಕ ಹೋರಾಟ ಮಾಡಿ ಆಸ್ತಿ ಉಳಿಸಿದೆ. ವಕ್ಫ್‌ ಮಂಡಳಿ ತಿಮಿಂಗಿಲದಂತೆ ಬಡವರ ಜಮೀನು ನುಂಗುತ್ತಿದೆ. ರೈತರು ಕಂಗಾಲಾಗಿ ತಮ್ಮ ಆಸ್ತಿಗಳ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಮುಸ್ಲಿಮರಿಗೆ ಎರಡು ಕೊಂಬು ಬಂದಿದೆ. ಸಿದ್ದರಾಮಯ್ಯ ಎಂದರೆ ಅಹಿಂದ ನಾಯಕ ಅಲ್ಲ. ಅವರೀಗ ಮುಸ್ಲಿಮರ ಚಾಂಪಿಯನ್‌ ಆಗಲು ಮುಂದಾಗಿದ್ದಾರೆ. ಲವ್‌ ಜಿಹಾದ್‌, ಲ್ಯಾಂಡ್‌ ಜಿಹಾದ್‌ ಬಳಿಕ ರೇಷನ್‌ ಕಾರ್ಡ್‌ ಜಿಹಾದ್‌ ಆರಂಭಿಸಿದ್ದಾರೆ. 45 ವರ್ಷದಿಂದ ರೇಷನ್‌ ಕಾರ್ಡ್‌ ಹೊಂದಿದ್ದ ವೃದ್ಧೆಯೊಬ್ಬರು ಈಗ ಕಾರ್ಡ್‌ ಕಳೆದುಕೊಂಡಿದ್ದಾರೆ. ಆದರೆ ಸರಕಾರ ಮರಳಿ ಅರ್ಜಿ ಹಾಕಿ ಎನ್ನುತ್ತಿದೆ. ಸರಕಾರ ತಪ್ಪು ಮಾಡಿದರೆ, ಜನರು ಲಂಚ ಕೊಟ್ಟು ರೇಷನ್‌ ಕಾರ್ಡ್‌ ಮಾಡಿಸಿಕೊಳ್ಳಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News