ದೇಶವನ್ನೇ ಲೂಟಿ ಮಾಡಿದ ಅದಾನಿಯಿಂದ ಪ್ರತಿಗಾಮಿ ಸರಕಾರಗಳಿಗೆ ಸಹಕಾರ : ಮಲ್ಲಿಕಾರ್ಜುನ್ ಖರ್ಗೆ

Update: 2024-11-14 08:58 GMT

ಕಲಬುರಗಿ: ಇಡೀ ದೇಶವನ್ನೇ ಲೂಟಿ ಮಾಡಿದ ಉದ್ಯಮಿ ಗೌತಮ್ ಅದಾನಿ ಪ್ರತಿಗಾಮಿ ಸರಕಾರಗಳಿಗೆ ಸಹಕಾರ ಕೊಡುತ್ತಿದ್ದಾನೆ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಅದಾನಿ ಬಗ್ಗೆ ಪದೇ ಪದೇ ಮಾತಾಡ್ತೀರಿ ಅಂತ ನಮಗೆ ಹೇಳ್ತಾರೆ, ಅದಾನಿ ಧರ್ಮದ ಆಧಾರದ ಮೇಲೆ ಭಾವನಾತ್ಮಕವಾಗಿ ಒಗ್ಗೂಡಿಸುವ ಶಕ್ತಿಗಳನ್ನು ಬೆಂಬಲಿಸುತ್ತಿದ್ದಾನೆ. ಲೂಟಿಗೈದ ಅದಾನಿಯ ಬೃಹತ್ ಹಣವನ್ನು ಮೋದಿ - ಅಮಿತ್ ಶಾ ತಗೊಂಡು ಚುನಾವಣೆಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ದೇಶದ ಸಂಪತ್ತು ಬೆರಳಣಿಕೆಯ ಉದ್ಯಮಿಯಲ್ಲಿರುವ ಅದಾನಿಯಂತಹ ಲೋಟಿಕೋರರನ್ನು ಮೋದಿ - ಶಾ ಬೆಂಬಲಿಸುತ್ತಿದ್ದಾರೆ. ಇವರು ಬಡವರ್ಗದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ದೇಶದ ರೈತರಿಗೆ ಸರಿಯಾದ ಬೆಂಬಲ ಬೆಲೆ ನೀಡುತ್ತಿಲ್ಲ, ರಾಜ್ಯಗಳಿಗೆ ಬರಬೇಕಾದ ಜಿಎಸ್‌ಟಿ ಪಾಲು ಕೊಡುತ್ತಿಲ್ಲ ಎಂದರು.

ಬಿಜೆಪಿಯವರು ಮೊದಲಿನಿಂದಲೇ ಸಂವಿಧಾನ, ತಿರಂಗಾವನ್ನು ಒಪ್ಪಿಲ್ಲ, ಇದನ್ನ ಒಪ್ಪದೇ ಅವರು ರಾಮಲೀಲಾ ಮೈದಾನದಲ್ಲಿ ಸಂವಿಧಾನವನ್ನೇ ಸುಟ್ಟಿದ್ದರು. ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯದಲ್ಲಿ ಜನರು ನಮ್ಮ ರಾಜ್ಯಕ್ಕೆ ಏನು ಕೊಡ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ನಮ್ಮ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ, ಕರ್ನಾಟಕದಲ್ಲಿ ಏನೆಲ್ಲಾ ಜಾರಿ ಮಾಡಿದ್ದೀವಿ, ಅವುಗಳನ್ನು ಅಧಿಕಾರಕ್ಕೆ ಏರಿದರೆ ಮಹಾರಾಷ್ಟ್ರದಲ್ಲೂ ಅನುಷ್ಠಾನಕ್ಕೆ ತರಲಿದ್ದೇವೆ ಎಂದರು.

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News