ಆಳಂದ: ಸರಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ

Update: 2025-01-07 10:55 GMT

ಕಲಬುರಗಿ: ಸರಕಾರಿ ನಿವೃತ್ತ ನೌಕರರು ತಮ್ಮ ಸೇವಾವಧಿಯಲ್ಲಿ ಮಾಡಿದ ಪರಿಶ್ರಮ ಮತ್ತು ತ್ಯಾಗವು ಸಮಾಜ ಮತ್ತು ದೇಶಕ್ಕಾಗಿದೆ. ನಿವೃತ್ತಿ ಬಳಿಕವೂ ಸಮಾಜಕ್ಕೆ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಅಭಿಪ್ರಾಯಪಟ್ಟರು.

ಆಳಂದ ಪಟ್ಟಣದ ಗುರುಭವನದಲ್ಲಿ ನಡೆದ ಸರಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವೃತ್ತಿಯಲ್ಲಿ ನಿವೃತ್ತರಾದರೂ ಜೀವನದಿಂದ ನಿವೃತ್ತಿಯಾಗದೆ ನಿಮ್ಮ ನಿತ್ಯ ಜೀವನದ ಕ್ರಿಯಾಶೀಲತೆ ಇಂದಿನವರಿಗೆ ಪ್ರೇರಣೆಯಾಗಲಿದೆ ಎಂದರು.

ನೌಕರರ ಸೇವೆ ಹಾಗೂ ಅವರ ಕೊಡುಗೆ ಸಮಾಜಕ್ಕೆ ದೊಡ್ಡ ಕೊಡುಗೆ ಇದೇ ತಮ್ಮ ಕಾರ್ಯಜೀವನದಲ್ಲಿ ದೇಶ ಮತ್ತು ಸಮಾಜಕ್ಕೆ ನೀಡಿದ ಅಮೂಲ್ಯ ಸೇವೆಯ ಅನುಭವವನ್ನು ಸರಕಾರ ಮತ್ತು ಸಮಾಜಕ್ಕೆ ಇಂದಿಗೂ ಅಗತ್ಯವಾಗಿದೆ. ನೌಕರರು ನಿವೃತ್ತಿಯ ನಂತರದ ಜೀವನವನ್ನು ಆರೋಗ್ಯಕರ ಮತ್ತು ಹರ್ಷಪೂರ್ಣವಾಗಿಡುವುದು ಮುಖ್ಯವಾಗಿದೆ ಎಂದರು.

ಸಂಘವು ಸಂವಹನ ಮತ್ತು ಸಹಕಾರಕ್ಕಾಗಿ ದೊಡ್ಡ ಶಕ್ತಿಯಾಗಲಿದೆ. ನೌಕರರ ಪಿಂಚಣಿ ಸಮಸ್ಯೆ, ಆರೋಗ್ಯ ಸೇವೆ, ಮತ್ತು ಇತರ ಸೌಲಭ್ಯಗಳನ್ನು ಸುಧಾರಿಸಲು ಸರ್ಕಾರದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಕಾಶಪ್ಪ ವಾಂಜರಖೇಡ್ ಮಾತನಾಡಿ, ನಿವೃತ್ತ ನೌಕರರ ಬೇಡಿಕೆಗೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಸಂಘದ ಪ್ರಗತಿಗೆ ಸರ್ವರು ಒಗ್ಗಟ್ಟಿನಿಂದ ಸಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಮೃತರಾವ್ ಹಿರೋಳಿ ಮಾತನಾಡಿ, ಸರ್ವ ನಿವೃತ್ತರು ಸಹಕಾರ ಸಭೆಗೆ ಹಾಜರಾಗಿ ಮಾರ್ಗದರ್ಶನ ನೀಡಿದರೆ ಮಾದರಿ ಸಂಘವಾಗಿ ಮುನ್ನೆಡೆಯಲು ಸಾಧ್ಯವಿದೆ ಎಲ್ಲರು ಕೈಜೋಡಿಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಉಸ್ತುರಿ ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ಸೇಡಂನ ಸಾಹಿತಿ ಲಿಂಗಾರೆಡ್ಡಿ, ಕಾರ್ಯದರ್ಶಿ ವಿಭೂಷಣ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ ಮತ್ತಿತರರು ಉಪಸ್ಥಿತರಿದ್ದು, ಮಾತನಾಡಿದರು.

ಸಂಘದ ಉಪಾಧ್ಯಕ್ಷ ಭೀಮಾಶಂಕರ ಮಡಿವಾಳ, ಸುಭಾಷ ಪಾಟೀಲ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಘಂಟೆ, ಗೌರವ ಅಧ್ಯಕ್ಷ ಎಸ್.ಎಚ್.ಗೋಧೆ, ಕೋಶಾಧ್ಯಕ್ಷ ಎಂ.ಎಸ್. ಬೆಳ್ಳೆ, ನಿರ್ದೇಶಕ ಬಾಬುರಾವ ಸುರವಾಸೆ, ಮಲ್ಲಣ್ಣ ಕರ್, ಥಾವೂರು ರಾಠೋಡ, ಶೋಭಾ ಶೇರಖಾನೆ ಉಪಸ್ಥಿತರಿದ್ದರು.

ಹಿರಿಯ ನಾಗರಿಕರ ಪರ ಬಾಬುರಾವ ಮಡ್ಡೆ, ಸುಭಾಷ ವಿಭೂತೆ ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಮಲಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮಂತ ಜಿಡ್ಡೆ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News