ಬರ ಪರಿಹಾರ ವರದಿ ಸಲ್ಲಿಕೆ ವಿಳಂಬವಾಗಿದೆ ಎಂಬ ಅಮಿತ್ ಶಾ ಹೇಳಿಕೆ ಸತ್ಯಕ್ಕೆ ದೂರ : ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ : ಬರ ಪರಿಹಾರ ಮನವಿ ಸಲ್ಲಿಸಲು ರಾಜ್ಯ ಸರಕಾರ ಮೂರು ತಿಂಗಳು ವಿಳಂಬ ಮಾಡಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಸುಳ್ಳು ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದ ಅವರು,"ರಾಜ್ಯದ 236 ತಾಲೂಕಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಹಾಗೂ 223 ತಾಲೂಕುಗಳ ಪೈಕಿ 196 ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು ರಾಜ್ಯ ಸರಕಾರ ಘೋಷಿಸಿ ಕೇಂದ್ರಕ್ಕೆ ಸೆಪ್ಟೆಂಬರ್ 22, 2023 ಎಂದು ವರದಿ ಸಲ್ಲಿಸಿತ್ತು. ನಂತರ 10 ಸದಸ್ಯರ ಕೇಂದ್ರದ ತಂಡ ಅಕ್ಟೋಬರ್ 05 ಹಾಗೂ 9 ರಂದು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿತ್ತು. ಆ ಬಳಿಕ, ರಾಜ್ಯದ ಮತ್ತೆ 21 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಹೆಚ್ಚುವರಿ ಮನವಿಯನ್ನು ಅಕ್ಟೋಬರ್ 9ರಂದು ಕೇಂದ್ರಕ್ಕೆ ಸಲ್ಲಿಸಲಾಗಿತ್ತು ಎಂದು ವಿವರಿಸಿದರು.
ಬರ ಮ್ಯಾನುವೆಲ್ ನಿಯಮಾವಳಿ ಪ್ರಕಾರ ಮುಂಗಾರು ಹಂಗಾಮಿನಲ್ಲಿನ ಬರದ ವರದಿಯನ್ನು ಅಕ್ಟೋಬರ್ 31 ಹಾಗೂ ಹಿಂಗಾರಿನ ಬರದ ವರದಿಯನ್ನು ಮಾರ್ಚ್ 31ರ ಒಳಗಾಗಿ ಸಲ್ಲಿಸಬೇಕು. ರಾಜ್ಯ ಸರಕಾದ ಮುಂಗಾರಿನ ಬರದ ವರದಿಯನ್ನು ಸೆಪ್ಟೆಂಬರ್ 22 ಕ್ಕೆಹಾಗೂ ಹೆಚ್ಚುವರಿ ಮನವಿಯನ್ನು ಅಕ್ಟೋಬರ್ 9 ಕ್ಕೆ ಸಲ್ಲಿಸಿದ್ದು, ನಿಯಮಾವಳಿ ನಿಗದಿಪಡಿಸಿದ ದಿನಾಂಕದ ಒಳಗೆ ಸಲ್ಲಿಸಲಾಗಿದೆ. ಆದರೂ ಕೂಡಾ ಕೇಂದ್ರ ಗೃಹ ಸಚಿವರು ಮನವಿಯನ್ನು ವಿಳಂಬವಾಗಿ ಸಲ್ಲಿಸಲಾಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಒಟ್ಟು 48 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, 18171.44 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆ ಸಚಿವ ನರೇಂದ್ರ ಸಿಂಗ್ ತೋಮರ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನವೆಂಬರ್ 15, 2023 ರಂದು ಬರೆದ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದರು.
ಇದಲ್ಲದೇ, ನವೆಂಬರ್ 23, 2023 ರಂದು ಕೃಷಿ ಸಚಿವ ಹಾಗೂ ಕಂದಾಯ ಸಚಿವರು ಖುದ್ದಾಗಿ ಕೇಂದ್ರ ಹಣಕಾಸು ಸಚಿವೆ ಅವರನ್ನು ಭೇಟಿಯಾಗಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಇದಾದ ನಂತರ, ಡಿಸೆಂಬರ್ 20, 2023 ರಂದು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ನಂತರ, ಜನವರಿ 19, 2024 ರಂದು ಮುಖ್ಯಮಂತ್ರಿ ಪ್ರಧಾನಿ ಅವರಿಗೆ ಪತ್ರ ಬರೆದು ಬರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಇಷ್ಟಾದರೂ ಕೇಂದ್ರ ತನ್ನ ನಿರ್ಲಕ್ಷ್ಯ ಧೋರಣೆ ಮುಂದುವರೆಸಿರುವುದನ್ನು ವಿರೋಧಿಸಿ ರಾಜ್ಯದ ಸಚಿವರು ಫೆಬ್ರವರಿ 7, 2024 ರಂದು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಬೇಕಾಯಿತು ಎಂದು ಖರ್ಗೆ ವಿವರಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದ್ದು, ಬರಪರಿಹಾರ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರ ಪತ್ರ ಬರೆಯುವ ಮೂಲಕ, ಸಚಿವರನ್ನು ಖುದ್ದಾಗಿ ಭೇಟಿ ಮಾಡುವ ಮೂಲಕ, ತನ್ನೆಲ್ಲ ಪ್ರಯತ್ನವನ್ನು ಮಾಡಿದ್ದರೂ ಕೂಡಾ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ಕರೆದು ತೀರ್ಮಾನ ಮಾಡುವ ಗೋಜಿಗೆ ಹೋಗಿಲ್ಲ. ಆದರೆ, ರಾಜ್ಯಕ್ಕೆ ಬಂದಾಗ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.