ಜನರ ಅಶೀರ್ವಾದ ಇರುವವರೆಗೆ ಜೀವ ಬೆದರಿಕೆಗಳಿಗೆ ಅಂಜುವುದಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

Update: 2024-04-01 16:36 GMT

ಕಲಬುರಗಿ: ನನಗೆ ಎಷ್ಟೇ ಜೀವಬೆದರಿಕೆಗಳು ಬರಲಿ, ಎದುರಿಸುತ್ತೇನೆ. ಜನರ ಆಶೀರ್ವಾದ ಇರುವವರೆಗೆ ಯಾವುದೇ ಜೀವ ಬೆದರಿಕೆಗಳಿಗೆ ಅಂಜುವುದಿಲ್ಲ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸೋಮವಾರ ಕಲಬುರಗಿ ನಗರದ ರಿಂಗ್ ರಸ್ತೆಯ ಮೊಘಲ್ ಗಾರ್ಡನ್ ನಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಿಂದ ರಾಜ್ಯದ ಜನರಿಗೆ ಅನುಕೂಲವಾಗಿದೆ. ಆದರೆ, ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಎಲ್ಲ ಯೋಜನೆಗಳನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ. ಅವರನ್ನು ನೀವು ಅಧಿಕಾರಕ್ಕೆ ತರುತ್ತೀರಾ ? ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಗ್ಯಾರಂಟಿಗಳು ರೀಲ್, ಮೋದಿ ಗ್ಯಾರಂಟಿಗಳು ರಿಯಲ್ ಎನ್ನುವ ಸಂಸದ ಉಮೇಶ್ ಜಾಧವ್‍ಗೆ ತರಾಟೆಗೆ ತೆಗೆದುಕೊಂಡ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆವು ಇದು ರಿಯಲ್. ಆದರೆ, ನೀವು ಅಧಿಕಾರಕ್ಕೆ ಬಂದರೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದೀರಿ ಅದು ರೀಲ್. ಯಾಕೆಂದರೆ ರೈತರ ಆದಾಯ ದ್ವಿಗುಣ ಮಾಡಲಿಲ್ಲ ಎಂದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದು ರೀಲ್ ಯಾಕೆಂದರೆ ಉದ್ಯೋಗ ಸೃಷ್ಟಿಸಲಿಲ್ಲ. ಆದರೆ, ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಿದ್ದೇವೆ ಅದು ರಿಯಲ್. ಮೊಸರು ಖರೀದಿ ಮಾಡುವುದರಿಂದ ಹಿಡಿದು ಯಾವುದೇ ವಸ್ತು ತೆಗೆದುಕೊಂಡರೆ ಅದಕ್ಕೆ ಟ್ಯಾಕ್ಸ್ ಕಟ್ಟಲೇಬೇಕು. ಜನರು ಉಸಿರಾಡಲು ಮಾತ್ರ ಮೋದಿ ಟ್ಯಾಕ್ಸ್ ಹಾಕಿಲ್ಲ ಅದನ್ನು ಬಿಟ್ಟರೆ ಮಿಕ್ಕೆಲ್ಲವಕ್ಕೂ ಟ್ಯಾಕ್ಸ್ ಹಾಕಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಲೀಡ್ ಕೊಟ್ಟಿದ್ದೀರಿ. ಈ ಸಲವೂ ಕನಿಷ್ಠ ಶೇ.90ರಷ್ಟು ಮತದಾನ ಮಾಡುವ ಮೂಲಕ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News