ಡಿ.12 ರಂದು ಕಬ್ಬು ಬೆಳೆಗಾರರಿಂದ ʼಬೆಳಗಾವಿ ಚಲೋʼ : ಭರತ್ ರಾಜ್

Update: 2024-11-08 11:32 GMT

ಕಲಬುರಗಿ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ 12ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ಚಲೋ ಚಳವಳಿ ನಡೆಸಲಾಗುವುದು ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್‌ ರಾಜ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಿಂದ 350 ರೈತರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಕಬ್ಬು ಬೆಳೆಗಾರರು ಪಾಲ್ಗೊಂಡು ಪ್ರತಿಭಟನೆ ನಡೆಸಲಾಗುವುದು ಎಂದರು.

ಶೇ. 9.50 ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬಿಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು. ಕರ್ನಾಟಕ ಕಬ್ಬು ಖರೀದಿ ಮತ್ತು ಸರಬರಾಜು ಅಧಿನಿಯಮ 2013ರ ಕಾಯ್ದೆ ರದ್ದುಪಡಿಸಿ, ಈ ಹಿಂದೆ ಇದ್ದ ಹಾಗೆ ಕನಿಷ್ಠ ಟನ್‌ಗೆ 500 ರೂ. ಎಸ್ ಎಪಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ರೈತ ವಿರೋಧಿ ಕಬ್ಬು ನಿಯಂತ್ರಣ ತಿದ್ದುಪಡಿ ಕರಡು ಆದೇಶ 2024ರ ಮಸೂದೆಯನ್ನು ಕೇಂದ್ರ ಸರಕಾರ ವಾಪಸ್ ಪಡೆಯಬೇಕು. ಈ ಮಸೂದೆಯ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರಕಾರ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಕ್ಕರೆ ಕಾರ್ಖಾನೆಗಳಲ್ಲಿ ತೂಕದಲ್ಲಿ ಮೋಸ ನಡೆಯುತ್ತಿದ್ದು, ಇವುಗಳ ಪಾರದರ್ಶಕವಾಗಿ ಪರೀಕ್ಷಿಸಲು ಪ್ರತಿ ಕಾರ್ಖಾನೆ ವ್ಯಾಪ್ತಿಗೆ ಸಮಿತಿ ರಚಿಸಿ, ಆ ಸಮಿತಿಗೆ ಐದು ಮಂದಿ ಕಬ್ಬು ಬೆಳೆಗಾರರ ಪ್ರತಿನಿಧಿಗಳನ್ನು ನೇಮಿಸಬೇಕು. ಕಬ್ಬು ಸರಬರಾಜು ಮಾಡಿದ 15 ದಿನದೊಳಗೆ ಹಣ ಪಾವತಿ ಮಾಡಬೇಕು. ವಿಳಂಬಕ್ಕೆ ಶೇ.15ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸಿದ್ದರಾಮ ದಣ್ಣೂರ, ಅಶೋಕ ಹೂಗಾರ್, ಅಂಬಾರಾಯ ಪೊಲೀಸ್ ಪಾಟೀಲ್, ದೀಪಕ ನಾಗೋರೆ, ಪ್ರಕಾಶ ಜಾನೆ, ಚಂದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Full View 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News