ಬೆಳಗಾವಿ ಅಧಿವೇಶನ | ನೂತನ ಶಾಸಕರಿಗೆ ಅನುದಾನ ನೀಡುವಂತೆ ವಿಜಯೇಂದ್ರ ಆಗ್ರಹ

Update: 2024-12-17 12:39 GMT

 ವಿಜಯೇಂದ್ರ 

ಬೆಳಗಾವಿ : ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ, ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸೂಕ್ತ ಅನುದಾನ ಸಿಗುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ಅನುದಾನ ನೀಡಬೇಕು ಎಂದು ಬಿಜೆಪಿ ಸದಸ್ಯ ವಿಜಯೇಂದ್ರ ಆಗ್ರಹಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೊಗರಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದರ ಜತೆಗೆ ಯುವಕರ ನಿರುದ್ಯೋಗ ಸಮಸ್ಯೆ, ಶಿಕ್ಷಣ, ಆರೋಗ್ಯ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗಮನ ಹರಿಸಬೇಕು. 2024ರ ಸೆಪ್ಟಂಬರ್ 17ರಂದು ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ 11 ಸಾವಿರ ಕೋಟಿ ರೂ.ಗಳ ಕ್ರಿಯಾ ಯೋಜನೆ ಘೋಷಣೆ ಮಾಡಿದ್ದು, ಈ ವರೆಗೂ ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ನೀಡುವ ಭರವಸೆ ನೀಡಿದ್ದ ಸರಕಾರ ಈ ವರೆಗೂ ಯಾವುದೇ ಕ್ರಮ ವಹಿಸಿಲ್ಲ. ಆಲಮಟ್ಟಿ ಮುಳುಗಡೆ ಪ್ರದೇಶಕ್ಕೆ ಸೂಕ್ತ ಪುನರ್ವಸತಿ ಯೋಜನೆ ಕೈಗೊಂಡಿಲ್ಲ. ಅಥಣಿಯಲ್ಲಿ ಕಳಪೆ ಬೀತ್ತನೆ ಬೀಜದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ತುಂಗಾಭದ್ರ ಜಲಾಶಯದ 19ನೆ ಕ್ರಸ್ಟ್ ಗೇಟ್ ಮುರಿದು ಬಿದ್ದಾಗ ಸಾಕಷ್ಟು ನೀರು ಪೋಲಾಗಿದೆ. ರೈತರು ಆತಂಕದಲ್ಲಿದ್ದರು. ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಉಳಿದ ಕ್ರಸ್ಟ್ ಗೇಟ್‍ಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News