ದಲಿತ ಸಾಹಿತ್ಯ ಮತ್ತು ಚಳವಳಿ ಒಂದು ನಾಣ್ಯದ ಎರಡು ಮುಖಗಳು : ಸಾಹಿತಿ ಡಾ.ಹನುಮಂತರಾವ್‌

Update: 2024-08-18 18:05 GMT

ಕಲಬುರಗಿ: ದಲಿತ, ಹಿಂದುಳಿದವರು, ದೀನರು ಎಂದು ಹೇಳಿಕೊಂಡು ಎಷ್ಟು ದಿನ ಎಂದು ಜೀವನ ಸಾಗಿಸಬೇಕು. ಸಾಧನೆ ಮಾಡಿ ಸಾಧಕರಾಗಿ ಸಾಯೋಣ ಎಂದು ಹಿರಿಯ ಸಾಹಿತಿ ಡಾ.ಹನುಮಂತರಾವ್‌ ಹೇಳಿದರು.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರವಿವಾರ ‌‌ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಜಿಲ್ಲಾ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಚಳವಳಿಯಿಂದ ಸಾಹಿತ್ಯ ಹುಟ್ಟುತ್ತದೆ. ಸಾಹಿತ್ಯದಿಂದ ಚಳವಳಿಗೆ ಶಕ್ತಿ ಬರುತ್ತದೆ. ಬುದ್ಧ, ಬಸವ, ಅಂಬೇಡ್ಕರ್ ಚಳವಳಿ ಮಾಡಿದ್ದರಿಂದಲೇ ಹೊಸ ಸಾಹಿತ್ಯ ರಚನೆ ಆಯಿತು ಎಂದು ಹೇಳಿದರು.

ಸಮ್ಮೇಳನವು ಹೋರಾಟಕ್ಕೆ, ಸಾಹಿತ್ಯಕ್ಕೆ ದಿಕ್ಸೂಚಿ ಆಗಬೇಕು. ನಮ್ಮ ನೆಲದ ಮಣ್ಣಿನ ವಾಸನೆ ಸಮ್ಮೇಳನ ಸಾರಬೇಕು. ದಲಿತ ಸಾಹಿತ್ಯ ಮತ್ತು ಚಳವಳಿ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ಹೇಳಿದರು.

ಕೇಂದ್ರೀಯ ವಿವಿ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಮಾತನಾಡಿ, ದಲಿತ ಚಳವಳಿ ಇಲ್ಲದೆ ದಲಿತ ಸಾಹಿತ್ಯ ಇಲ್ಲ. ಹೋರಾಟದ ಸಾಗರಕ್ಕೆ ನೂರಾರು ನದಿಗಳು ಎನ್ನುವಂತೆ ಚಳವಳಿಯೇ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿತು. ಚರಿತ್ರೆಯ ಹೋರಾಟದ ನೆನಪುಗಳನ್ನು ಮಾಡುತ್ತಾ ನಮ್ಮ ನಾಳೆಯ ಚರಿತ್ರೆ ಕಟ್ಟಿಕೊಳ್ಳಬೇಕು ಎಂದರು.

ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಅಣದೂರದ ಬಂತೆಜೀ ವರಜ್ಯೋತಿ ಥೇರೋ, ಬುದ್ಧವಿಹಾರದ ಸಂಗಾನಂದ ಬಂತೆಜೀ, ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಶಿವರಾಜ ಅಂಡಗಿ, ಶರಣರಾಜ ಚಪ್ಪರಬಂಧಿ, ಧರ್ಮಣ್ಣ ಧನ್ನಿ, ಡಾ.ವಿಷ್ಣುವರ್ಧನ, ಸುರೇಶ ಹಾದಿಮನಿ, ಕಲ್ಯಾಣರಾವ ಶೀಲವಂತ ಇತರರಿದ್ದರು.

ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ನಿರ್ಣಯಗಳು :

ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನಾಡು- ನುಡಿ ಸೇವೆಗಾಗಿ ಅನುದಾನ ಮೀಸಲಿಡಬೇಕು, ಕಲಬುರಗಿ ಜಿಲ್ಲೆಯ ಪ್ರಧಾನ ಬೆಳೆ ತೊಗರಿ ಬೆಳೆಗೆ ಬೆಂಬಲ ಬೆಲೆ ಒದಗಿಸಬೇಕು, ಕನ್ನಡ ಮಾಧ್ಯಮದಲ್ಲಿ ಓದಿದ ಯುವಕರಿಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸೂಕ್ತ ಮೀಸಲಾತಿ ಒದಗಿಸಬೇಕು, ಜಿಲ್ಲಾ ಮಟ್ಟದ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ನಡೆಸಲು ಸರ್ಕಾರ ಅನುದಾನ ನೀಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News