ಈಶ್ವರಪ್ಪ ಮಾತಿಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತಿಲ್ಲ: ಪ್ರಿಯಾಂಕ್ ಖರ್ಗೆ ತಿರುಗೇಟು

Update: 2024-02-10 15:50 GMT

ಕಲಬುರಗಿ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರ ಮಾತಿಗೆ ಬಿಜೆಪಿಯಲ್ಲೇ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರು ಏನಾದರೂ ಬಾಯಿ ಬಡಿದುಕೊಳ್ಳಲಿ, ಬಟ್ಟೆ ಹರಿದುಕೊಳ್ಳಲಿ, ನಮಗೇನಾಬೇಕಿದೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ಶನಿವಾರ ಕಲಬುರಗಿಯ ಜಿಮ್ಸ್ ಆವರಣದಲ್ಲಿ ಅಪಘಾತ ಚಿಕಿತ್ಸಾ ವಿಭಾಗದ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ಖರ್ಗೆ ಅಂಥವರ ಹೊಟ್ಟೆಯಲ್ಲಿ ಇಂತಹ ಕೆಟ್ಟ ಹುಳು ಹುಟ್ಟಿದೆಯಲ್ಲ ಅಂತ ನನಗೆ ಆಶ್ಚರ್ಯವಾಗುತ್ತಿದೆ ಎಂದು ಈಶ್ವರಪ್ಪ ನೀಡಿದ್ದ ಹೇಳಿಕೆಗೆ’ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ನಾನು ಕೆಟ್ಟ ಹುಳವೋ, ಒಳ್ಳೆಯ ಹುಳವೋ ತೆಗೆದುಕೊಂಡು ನಿಮಗೇನು ಮಾಡುವುದಿದೆ? ನಮ್ಮ ತಂದೆ, ತಾಯಿ ತಾನೆ ನಮ್ಮನ್ನು ಸಂಬಾಳಿಸುತ್ತಿರುವುದು. ನಿಮ್ಮ ರಾಜಾರೋಷವನ್ನು ಕೇಂದ್ರ ಸರಕಾರದ ಮುಂದೆ ತೋರಿಸಿ, ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈಶ್ವರಪ್ಪ ಅವರ ಹಿರಿತನಕ್ಕೆ ಗೌರವ ಕೊಟ್ಟು ಬಹುವಚನ ಪ್ರಯೋಗಿಸುತ್ತಿದ್ದೇನೆ. ಅವರಿಗೆ ನಮ್ಮ ಭಾಷೆ ಅರ್ಥವಾಗದೆ ಇದ್ದರೆ, ಬೇರೆ ಭಾಷೆಯಲ್ಲಿಯೂ ಅವರಿಗೆ ಅರ್ಥವಾಗುವಂತೆ ತಿಳಿಸಲು ಬರುತ್ತದೆ. ನಮ್ಮ ಮೈಯಲ್ಲೂ ಹರಿಯುತ್ತಿರುವುದು ಅಂಬೇಡ್ಕರ್ ರಕ್ತ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮಾಜಿ ಉಪ ಮುಖ್ಯಮಂತ್ರಿಯಾಗಿದ್ದ ಈಶ್ವರಪ್ಪ ಗುಂಡು ಹಾಕಿ ಕೊಲ್ಲುವ ಕಾನೂನು ತರಬೇಕೆಂದು ಹೇಳಿಕೆ ನೀಡಿರುವುದು ಅವರ ವಿವೇಕತನ ಎಷ್ಟಿದೆ ಎಂದು ತೊರಿಸಿಕೊಡುತ್ತದೆ. ಈಶ್ವರಪ್ಪಗೆ ಅವರ ಪಕ್ಷದಲ್ಲಿ ಬಯಸದೆ ನಿವೃತ್ತಿ ಸಿಕ್ಕಿದೆ. ಪಕ್ಷದಲ್ಲಿ ಮಾರ್ಗದರ್ಶಕ ಮಂಡಳಿಯಲ್ಲಿಯೂ ಅವರಿಗೆ ಅವಕಾಶ ಸಿಗುವುದಿಲ್ಲ. ಆದುದರಿಂದ, ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ವಿಲ್ಲ ಎಂದು ಅವರು ಹೇಳಿದರು.

ಹತ್ತು ವರ್ಷಗಳಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ವಿರುದ್ಧ ಕೈಜೊಡಿಸುವುದನ್ನು ಬಿಟ್ಟು ಬಿಜೆಪಿಯವರು ಮೋದಿ ಅವರ ಗುಲಾಮರಾಗಿ ಮಾತನಾಡುತ್ತಿದ್ದಾರೆ. ಮೋದಿ ಆಡಳಿತದಲ್ಲಿ ಕೇಂದ್ರ ಸರಕಾರ ಕನ್ನಡಿಗರಿಗೆ ಏನು ಮಾಡಿದೆ ಎಂಬುದು ಪಟ್ಟಿ ಕೊಡಲಿ ಎಂದು ಅವರು ಸವಾಲು ಹಾಕಿದರು.

ಪ್ರಧಾನಿ ಮೋದಿ ಸೇರಿದಂತೆ ಕೇಂದ್ರದ ಸಚಿವರು ಸಂಸತ್ತಿನಲ್ಲಿ ಭಾಷಣ ಮಾಡುವಾಗ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತನಾಡುವುದಿಲ್ಲ. ನೆಹರು, ರಾಜೀವ್ ಗಾಂಧಿ, ಇಂದಿರಾಗಾಂಧಿ, ಮನಮೋಹನ್ ಸಿಂಗ್ ಈಗ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಹೇಳಿಕೊಂಡು ಭಾಷಣ ಮಾಡುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಹಲವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News