ಬರ ನಿರ್ವಹಣೆ ಕೆಲಸದ ಕಡೆ ಗಮನ ಕೊಡಿ: ಅಧಿಕಾರಿಗಳಿಗೆ ಸಿಎಂ ಸೂಚನೆ

Update: 2024-05-23 10:13 GMT

ಕಲಬುರಗಿ: ಲೋಕಸಭೆ ಚುನಾವಣೆಯ ಮತದಾನ ಮುಕ್ತಾವಾಗಿರುವುದರಿಂದ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತಿಯಿಂದ ಸಡಿಲಿಕೆ ನೀಡಿರುವುದರಿಂದ ಬರಗಾಲ ನಿರ್ವಹಣೆ ಸೇರಿದಂತೆ ಅಭಿವೃದ್ಧಿ ಕೆಲಸದ ಕಡೆ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು ಎಂದು ಜಿಲ್ಲೆಯ ಡಿ.ಸಿ., ಜಿಲ್ಲಾ ಪಂಚಾಯತ್ ಸಿ.ಇ.ಓ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದರು.

ಗುರುವಾರ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಗೃಹ ಕಚೇರಿ "ಕೃಷ್ಣಾ" ದಿಂದ ವಿಡಿಯೋ ಸಂವಾದ‌ ಮೂಲಕ ರಾಜ್ಯದ ಎಲ್ಲಾ ಡಿ.ಸಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬರಗಾಲ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು, ಮುಂಗಾರು ಪೂರ್ವ ಮಳೆ ಎಲ್ಲೆಡೆ ಉತ್ತಮವಾಗಿದೆ. ಹೀಗಾಗಿ ಬಿತ್ತನೆ ಕಾರ್ಯ ಚುರುಕಾಗಬೇಕು. ಡಿ.ಸಿ., ಜಿಲ್ಲಾ ಪಂಚಾಯತ್ ಸಿ.ಇ.ಒ ಇದರ ಮೇಲುಸ್ತುವಾರಿ ವಹಿಸಬೇಕು ಎಂದರು.

ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಎಲ್ಲಿಯೂ ಕೊರತೆಯಾಗದಂತೆ ನೋಡಬೇಕು. ರಾಜ್ಯದಲ್ಲಿ ದಾಸ್ತಾನು ಸಾಕಷ್ಟಿದೆ. ಆದರೆ ಜಿಲ್ಲಾ, ತಾಲೂಕಿಗೆ ಬೇಡಿಕೆಯನುಗುಣವಾಗಿ ಬೀಜ, ರಸಗೊಬ್ಬರ, ಕೀಟನಾಶಕ ಸರಿಯಾಗಿ ಪೂರೈಸಬೇಕು. ಇದಕ್ಕೆ ಸರಿಯಾಗಿ ಪ್ಲ್ಯಾನ್ ಮಾಡಿ ವಿತರಣೆ ಮಾಡಬೇಕು. ರೈತರಿಂದ ದೂರು ಬಾರದಂತೆ ನೋಡಿಕೊಳ್ಳಬೇಕು. ಹಾವೇರಿಯಲ್ಲಿ ಬೀಜಕ್ಕೆ ಜನ ಕ್ಯೂ ನಿಂತಿರುವುದು ಮಾಧ್ಯಮ ಮುಖಾಂತರ ತಿಳಿದುಬಂದಿದೆ. ಈ ರೀತಿ ಆಗಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮಳೆಗಾಲ ಆರಂಭಕ್ಕೆ 15-20 ದಿನ‌ ಉಳಿದಿವೆ. ಮಳೆಗಾಲ ಆರಂಭವಾದ ನಂತರ ಹೊಸ‌ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆಯು ಈಗಿನಿಂದಲೆ ಪೂರ್ವ ತಯ್ಯಾರಿ ಮಾಡಿಕೊಂಡು ಅದರ‌ ನಿಯಂತ್ರಣಕ್ಕೆ ಮುಂದಾಗಬೇಕು. ಎಲ್ಲಿಯೂ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರ ವಹಿಸಬೇಕೆಂದು. ನೀರು ಪೂರೈಕೆ ಮುನ್ನ ಅದು ಕುಡಿಯಲು ಯೋಗ್ಯವಾಗಿದಿಯೇ ಎಂದು ಪರೀಕ್ಷಿಸಿ ಪೂರೈಸಬೇಕು ಎಂದು ಸಿ.ಎಂ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೈಸೂರಿನ ಎರಡು ಗ್ರಾಮಗಳಲ್ಲಿ ಕಾಲರಾ ಕಂಡು ಬಂದಿದೆ. ಇದಕ್ಕೆ ಕಾರಣ ಕಲುಷಿತ ನೀರು. ನೀರು ಕಲುಷಿತಗೊಳ್ಳಲು ಇಂಜಿನಿಯರುಗಳು ಕಾರಣ. ಕುಡಿಯಲು ನೀರು ಯೋಗ್ಯವೇ ಅಲ್ಲವೇ ಎಂಬುದನ್ನು ಪತ್ತೆ ಮಾಡದಿರುವುದು ದೊಡ್ಡ ಅಪರಾಧ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯ ಘಟನೆ ಸಂಭವಿಸಿದೆ. ಇದಕ್ಕೆ ಯಾರು ಜವಾಬ್ದಾರಿ. ಕುಡಿಯುವ ನೀರಿನ ಪರೀಕ್ಷೆ ನಿತ್ಯವೂ ಆಗಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳೇ ಇದಕ್ಕೆ ಹೊಣೆ. ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಲಾಗುವುದು. ಇನ್ನು ಮುಂದೆ ಕಲುಷಿತ ನೀರಿನಿಂದ ತೊಂದರೆ ಆದರೆ ಡಿಸಿಗಳೇ ನೇರ ಹೊಣೆ. ಕಾಲರ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬರ ಪರಿಹಾರ ಮೊತ್ತವನ್ನು ರೈತರ ಸಾಲಕ್ಕೆ ವಜಾ ಮಾಡಿಕೊಳ್ಳಬಾರದು ಎಂದು ಬ್ಯಾಂಕರ್‌ಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿರುವ ಸಿಎಂ,   ಸಕಾಲದಲ್ಲಿ ರೈತರಿಗೆ ಸಾಲ ಸಿಗುವುದನ್ನು ಖಾತರಿಪಡಿಸಬೇಕು ಎಂದು ನಿರ್ದೇಶಿಸಿದರು.

 ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕನ್ನಡ‌ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಕ್ಕರೆ‌ ಮತ್ತು ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಯೋಜನೆ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಸಿ.ಎಂ. ಅವರೊಂದಿಗೆ ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News