ಗಡಿನಾಡಿಗೆ ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸರಕಾರ ಆದ್ಯತೆ ನೀಡಲಿ : ಧರ್ಮಣ್ಣ ಧನ್ನಿ
ಕಲಬುರಗಿ : ಗಡಿ ತಾಲೂಕುಗಳಿಗೆ ರಾಜ್ಯ ಸರಕಾರ ಕನ್ನಡ ಕಟ್ಟುವ ಜೊತೆಗೆ ನೀರಾವರಿ ಶಿಕ್ಷಣ ಮತ್ತು ಆರೋಗ್ಯದಂತ ಹಲವು ಕ್ಷೇತ್ರಗಳಿಗೆ ಆದ್ಯತೆ ನೀಡಲು ಕ್ರಮವಹಿಸಬೇಕು ಎಂದು 12ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಧರ್ಮಣ್ಣ ಧನ್ನಿ ಅವರು ಹೇಳಿದರು.
ಆಳಂದ ತಾಲೂಕಿನ ಮಹಾರಾಷ್ಟ್ರ ಗಡಿ ಸರಹದ್ದಿನ ಬಳಿಯ ಹಿರೋಳಿ ಗ್ರಾಮದಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಹಮ್ಮಿಕೊಂಡ 12ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣ ಮಂಡಿಸಿ ಅವರು ಮಾತನಾಡಿದರು.
ಗಡಿ ಭಾಗದ ನೆಲ, ಜಲ, ಸಂರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗರು ಶ್ರಮಿಸಬೇಕು. ಅಂತರ್ಜಲ ಹೆಚ್ಚಳಕ್ಕೆ ಶಿರಪೂರ ಮಾದರಿಯ ನೀರಾವರಿ ಯೋಜನೆಗಳು ಆಳಂದ ತಾಲೂಕಿನಲ್ಲಿ ವಿಸ್ತರಿಸಿ ಜಾರಿಗೊಳಿಸಬೇಕು. ಗಡಿ ಭಾಗದ ಕನ್ನಡ ಶಾಲೆಗಳಿಗೆ ಶಿಕ್ಷಕರ ಕೊರತೆ ಆಗದಂತೆ ನೇಮಕ ಮಾಡಿಕೊಳ್ಳಬೇಕು. ಹಾಗೂ ಅಗತ್ಯವಿರುವ ಕನ್ನಡ ಶಾಲೆಗಳನ್ನು ಆರಂಭಿಸಬೇಕು. ಖಜೂರಿ, ಮಾದನಹಿಪ್ಪರಗಾ, ಕಡಗಂಚಿ, ಹಿರೋಳಿ, ನಿಂಬರ್ಗಾ, ಚಿಂಚನಸೂರ ಗ್ರಾಮಗಳಲ್ಲಿ ಸರಕಾರಿ ಪಿಯುಸಿ, ತಾಂತ್ರಿಕ ಶಿಕ್ಷಣ ಮತ್ತು ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಬೇಕಾಗಿದೆ.
ತಾಲೂಕಿನಲ್ಲಿ ಜಿನುಗು ಕೆರೆ ನಿರ್ಮಾಣ, ಗೊಕಟ್ಟು, ಅರಣ್ಯ ಪ್ರದೇಶಗಳ ಅಭಿವೃದ್ಧಿ ಮತ್ತು ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ನಿರ್ವಹಣೆ ಆಗಬೇಕು. ಕೂಲಿ ಕಾರ್ಮಿಕರು ವಲಸೆ ಹೋಗದಂತೆ ಮುತುವರ್ಜಿ ವಹಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ತಾಲೂಕಿನ ಕೈಮಗ್ಗ ನೇಕಾರರಿಗೆ ಸರಕಾರದ ಸಾಲ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ದೊರೆಯಬೇಕು. ಇತಿಹಾಸ ಪರಂಪರೆ ಕುರಿತು ಈಗಾಗಲೇ ಗುರುತಿಸಿದ 32 ಶಾಸನಗಳು ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಕಾರ್ಯ ನಡೆಯಬೇಕು. ಕಬ್ಬು ಮತ್ತು ತೊಗರಿ ಬೆಳೆಗಾರರಿಗೆ ರಾಜ್ಯ ಸರಕಾರ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಮಕ್ಕಳಿಗೆ ಭಾಷಾಭಿಮಾನ, ಕನ್ನಡ ನಾಡು ನುಡಿ ಮತ್ತು ನೆಲ ಜಲಗಳ ಜಾಗೃತಿ ಮೂಡಿಸಬೇಕು. ತಾಲೂಕಿನಲ್ಲಿ ಇಂಗ್ಲೀಷ್ ಕಲಿಸಬೇಕೆಂಬ ವ್ಯಾಮೋಹ ಪಾಲಕರಲ್ಲಿ ಹೆಚ್ಚುತ್ತಿದೆ. ಆದರೆ ಕನ್ನಡದಲ್ಲಿ ಕಲಿತ ಮಕ್ಕಳು, ನಾಳೆ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ. ನಾವು ಅನ್ಯ ಭಾಷೆಯನ್ನು ಪ್ರೀತಿಸಿ ಗೌರವಿಸೋಣ. ಆದರೆ ದ್ವೇಷ ಬೇಡ. ಭಾಷೆ ನಮ್ಮ ಸಂಹನ ಮಾಧ್ಯಮವಾಗಿದೆ ಎಂದರು.
ಇನ್ನೂ ತಾಲೂಕಿನ ಅನೇಕ ಯುವಕರು ಸೈನ್ಯದಲ್ಲಿ ಅಮೋಘ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟಭಕ್ತಿ, ಪ್ರೇಮ ಮೆರೆಯುತ್ತಿದ್ದಾರೆ. ಅವರೆಲ್ಲ ರಾಷ್ಟ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸಿ ಹೆಸರು ಮಾಡುತ್ತಿದ್ದಾರೆ. ತಲೆಯ ತುಂಬಾ ಜ್ಞಾನ ತುಂಬಿ ಹೊಳೆಯಬೇಕು, ಕಂಗಳು, ಎದೆಯ ತುಂಬಾ ತಳಕಬೇಕು ತಾಯಿ ಕನ್ನಡ ಬೆಳದಿಂಗಳ, ನಡೆ ಚನ್ನ ಎಲ್ಲಿ ನೋಡಿದರಲ್ಲಿ ಕನ್ನಡವೇ ಕಿರು ಹಣತೆ ಹಚ್ಚಿ. ಎಂದು ಹೇಳಿ ಬರುವ ದಿನಗಳಲ್ಲಿ ಎಲ್ಲರು ಸೇರಿ ಕನ್ನಡ ನಾಡು ನುಡಿ ಕಟ್ಟೋಣ. ಸಮೃದ್ಧಿ ಬೀಡನ್ನಾಗಿ ಬಹು ಎತ್ತರಕ್ಕೆ ಬೆಳೆಸೋಣ. ಈ ನಾಡು ಕನ್ನಡಮಯ ಬೆಳಕಾಗಬೇಕೆಂದು ಅವರು ಹಾರೈಸಿದರು.
ಅಭಿವೃದ್ಧಿಯ ಹರಿಕಾರರು :
ಮಾಜಿ ಮುಖ್ಯಮಂತ್ರಿ ದಿ.ವಿರೇಂದ್ರ ಪಾಟೀಲ, ಹಾಲಿ ಶಾಸಕರು, ಮುಖ್ಯಮಂತ್ರಿಗಳ ಆಪ್ತ ಸಲಹೆಗಾರರಾದ ಬಿ.ಆರ್.ಪಾಟೀಲ್ ಅವರು ವಿಧಾನ ಪರಿಷತ್ತಿನ ಉಪ ಸಭಾಪತಿಗಳಾಗಿ ಮಾಡಿದ ಸೇವೆ ನೆನಪಿಸಿಕೊಂಡರೆ ನಿಜಕ್ಕೂ ಹೆಮ್ಮೆ ಪಡಬೇಕಾಗಿದೆ. ಹಾಗೂ ಮಾಜಿ ಶಾಸಕರಾದ ದಿವಂಗತ ಎ.ವಿ.ಪಾಟೀಲ್ ಆಳಂದ, ಅಣ್ಣಾರಾವ ಪಾಟೀಲ ಕೊರಳ್ಳಿ, ಶರಣಬಸಪ್ಪ ಪಾಟೀಲ ಧಂಗಾಪೂರ, ಸುಭಾಶ್ ಆರ್.ಗುತ್ತೇದಾರ ಅವರ ರಾಜಕೀಯ ನಡೆ ನುಡಿ ಮೆಚ್ಚುವಂಥವು. ರಾಜಕೀಯ ಮುತ್ಸದ್ಧಿ ಡಿ.ಬಿ.ಕಲಮಣ್ಕರ ಅನೇಕ ರಾಜಕೀಯ ಮುತ್ಸದ್ಧಿಗಳನ್ನು ತವರಾಗಿದೆ ಎಂದು ಇಲ್ಲಿನ ಕಲೆ, ಸಾಂಸ್ಕೃತಿ, ಹೋರಾಟಗಾರ ಶಾಸನ ಕೊಡುಗೆ ಕುರಿತು ಪ್ರಸ್ತಾಪಿಸಿದ ಅವರು ಇದನ್ನು ಮರುಕಳಿಸುವಂತಾಗಬೇಕು ಎಂದು ಹೇಳಿದರು.