ಕಲಬುರಗಿ | ಭಾರತೀಯ ಸಂವಿಧಾನ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ : ಸುಬ್ಬಣ್ಣ ಜಮಖಂಡಿ
ಕಲಬುರಗಿ : ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವು ಸರ್ವರಿಗೂ ಸಮಬಾಳು-ಸಮಪಾಲು ನೀಡಿದೆ ಎಂದು ಚಿಂಚೋಳಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.
ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಬಿಸಿಎಂ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಯುನಿಟಿ ಆಫ್ ಮೂಲನಿವಾಸಿ ಸಂಘಟನೆ ಹೊಸದಿಲ್ಲಿ ಹಾಗೂ ವಿದ್ಯಾರ್ಥಿ ಫೆಡರೇಶನ್ ವತಿಯಿಂದ ಹಮ್ಮಿಕೊಂಡ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸುವುದಕ್ಕೆ ಸಂವಿಧಾನ ರಾಷ್ಟ್ರಕ್ಕೆ ಅರ್ಪಣೆಗೊಂಡಿರುತ್ತದೆ. ದೇಶದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನ ಕಲ್ಪಿಸಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ ಅವರು, ಭಾರತೀಯರಾದ ಎಲ್ಲರೂ ವಿಶೇಷವಾಗಿ ವಿದ್ಯಾರ್ಥಿ ಯುವ ಸಮುದಾಯ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಪಠಣ ಮಾಡಬೇಕು. ಆ ಮುಖಾಂತರ ನಿಜ ಜೀವನದಲ್ಲಿ ಅದನ್ನು ಅಳವಡಿಸಿಕೊಂಡು ದೇಶದಲ್ಲಿ ಎಲ್ಲರೂ ಗೌರವ, ಘನತೆ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡು ಆದರ್ಶರಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ದುಗ್ಗನ್, ಅನುಸೂಯ ಚೌವ್ಹಾಣ್, ಸುಲೇಪೇಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂತೋಷ ರಾಠೋಡ, ಗಣಪತಿ ದೇವಕತೆ, ಮುಖ್ಯಗುರುಗಳು ಶ್ರೀಕಾಂತ ರೆಡ್ಡಿ, ರಝಾಕ್ ಪಟೇಲ್, ಮಲ್ಲಿಕಾರ್ಜುನ ಪಾಳಾದಿ, ರೇವಣಸಿದ್ದಪ್ಪ ಸುಬೇದಾರ್, ಸಾಗರ ಹಾಫೀಝ್ ಸರ್ದಾರ್ ಮಾತನಾಡಿದರು.
ಅಶೋಕ ಹೂವಿನಬಾವಿ ವಿಶೇಷ ಉಪನ್ಯಾಸ ನೀಡಿದರು. ಪ್ರಾಸ್ತಾವಿಕವಾಗಿ ಮಾರುತಿ ಗಂಜಗಿರಿ ಮಾತನಾಡಿದರು. ಮೋಹನ ಐನಾಪೂರ ನಿರೂಪಿಸಿದರು. ಹರೀಶ್ ದೇಗಲ್ಮಡಿ ವಂದಿಸಿದರು.