ಕಲಬುರಗಿ | ಸರಕಾರಿ ಸವಲತ್ತು ಪಡೆದು ಆದಾಯ ಹೆಚ್ಚಿಸಿಕೊಳ್ಳಿ : ಶಾಸಕ ಅಲ್ಲಮಪ್ರಭು ಪಾಟೀಲ್

Update: 2024-11-26 18:09 GMT

ಕಲಬುರಗಿ : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ರೈತಾಪಿ ವರ್ಗಕ್ಕೆ ಅನೇಕ ಸಹಾಯಧನ ಯೋಜನೆಗಳನ್ನು ಜಾರಿಗೆ ತಂದಿದ್ದು, ಸರಕಾರಿ ಸವಲತ್ತನ್ನು ಸದ್ಬಳಕೆ ಮಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳುವಂತೆ ರೈತರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ ನೀಡಿದ್ದಾರೆ.

ಮಂಗಳವಾರ ನಗರದ ಆಳಂದ ರಸ್ತೆಯ ತಾರಾ ಬಂಗರಗೆ ಕಲ್ಯಾಣ ಮಂಟಪದಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ರೈತರಿಗೆ ಪ್ರಸಕ್ತ 2024-25ನೇ ಸಾಲಿಗೆ ಕೃಷಿ ಇಲಾಖೆಯ ವಿವಿಧ ಸಹಾಯಧನ ಯೋಜನೆಗಳಡಿ ಕೃಷಿ ಯಂತ್ರೋಪಕರಣಗಳನ್ನು ಹಾಗೂ ತುಂತುರು ನೀರಾವರಿ ಘಟಕಗಳನ್ನು ವಿತರಿಸಿ ಅವರು ಮಾತನಾಡಿದರು.

ರೈತ ವರ್ಗದ ಕಲ್ಯಾಣ ದೃಷ್ಠಿಯಿಂದ ಕೃಷಿ ಇಲಾಖೆಗೆ ಸರಕಾರ ಸಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡುತ್ತಿದೆ. ಅರ್ಹ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳು ತಲುಪಿಸುವ ಉದ್ದೇಶದಿಂದ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲಾಗಿದೆ. ಸವಲತ್ತು ಪಡೆಯಲು ಇಚ್ಚಿಸುವ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕೆಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಯೋಜನೆವಾರು ಮಾಹಿತಿ ನೀಡಿದರು.

98 ರೈತರಿಗೆ ಕೃಷಿ ಉಪಕರಣಗಳ ವಿತರಣೆ :

ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ರೋಟೋವೇಟರ್-2, ಟ್ರ್ಯಾಕ್ಟರ್ ಚಾಲಿತ ಬಿತ್ತುವ ಕುರಿಗೆ-1, ನೇಗಿಲು-1, ಡಿಸೇಲ್ ಇಂಜಿನ್-4 ಹಾಗೂ ತುಂತುರು ನೀರಾವರಿ ಘಟಕಗಳು-90 ಹೀಗೆ ಒಟ್ಟು 98 ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತು ಮತ್ತು ತೊಗರಿಯಲ್ಲಿ ಬಂದಿರುವ ಒಣ ಬೇರು ಕೊಳೆ ರೋಗದ ನಿಯಂತ್ರಣ ಕುರಿತು ರೈತರಿಗೆ ಕೃಷಿ ಇಲಾಖೆಯಿಂದ ವಿವರವಾದ ತರಬೇತಿ ಸಹ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಂತೋಷ ಪಾಟೀಲ್ ದಣ್ಣೂರ, ಮುಖಂಡರಾದ ಲಿಂಗರಾಜ ಕಣ್ಣಿ, ಪವನಕುಮಾರ ವಳಕೇರಿ, ಸಂಗಮೇಶ ನಾಗನಳ್ಳಿ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಅರುಣಕುಮಾರ, ಕೃಷಿ ಅಧಿಕಾರಿಗಳಾದ ಅಬ್ದುಲ್ ಕರೀಮ್, ಕೇಸರ ಸಿಂಗ್ ಹಜಾರೆ, ಕೃಷಿ ಉಪನಿರ್ದೇಶಕ ಸೋಮಶೇಖರ ಬಿರಾದಾರ, ರಾಘವೇಂದ್ರರಾವ್ ಮತ್ತಿತರರು ಉಪಸ್ಥಿತರಿದ್ದರು.

Full View

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News